ಕೇವಲ ಕೌಶಲ್ಯ ಕಲೆಯಲ್ಲ; ಅನುಕರಣೆಯೂ ಕಲೆ ಅಲ್ಲ

ಗುಲ್ಬರ್ಗದ ಹಿರಿಯ ಕಲಾವಿದ ಜೆ.ಎಸ್‌. ಖಂಡೇರಾವ್‌
ಜಾಗತೀಕರಣದ ಹೊಸ ಗಾಳಿಯಿಂದಾಗಿ ಬದುಕಿಗಾಗಿ ಕಲೆಯನ್ನು ಆಶ್ರಯಿಸಿರುವ ಕಮರ್ಷಿಯಲ್‌ ಆರ್ಟಿಸ್ಟ್‌ಗಳಿಗೆ ಹೊಡೆತ ಬಿದ್ದಿದೆ, ಬೀಳುತ್ತಿದೆ. ಆನ್ವಯಿಕ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬದಲಾದ ಕಾಲಕ್ಕೆ ತಕ್ಕಂತೆ ಅವರು ವೇಗವಾಗಿ ಬದಲಾಗ ಬೇಕಾದ ಸ್ಥಿತಿ ಇದೆ. ಅವರಿಗೀಗ ಕಂಪ್ಯೂಟರ್ ಕಲಿಯುವುದು ಅನಿವಾರ್ಯವಾಗಿದೆ.
ಎಷ್ಟೇ ಆಧುನಿಕ ಕಂಪ್ಯೂಟರ್ ಬಂದರೂ ಅದು ಕಲಾವಿದನ ಸ್ಥಾನ ಆಕ್ರಮಿಸುವುದಿಲ್ಲ. ಎರಡೂ ಬೇರೆ. ಕಲಾವಿದ ಕುಂಚದ ಬದಲಿಗೆ ಕಂಪ್ಯೂಟರ್ ಬಳಸಬಹುದು. ಅದರರ್ಥ ಬ್ರಷ್ ಬದಲಿಗೆ ಮೌಸ್ ಬರುತ್ತದೆ ಅಷ್ಟೇ. ಅದಕ್ಕೂ ಕಲಾವಿದನ ಚಿಂತನೆ ಮತ್ತು ಕೌಶಲ್ಯ ಬೇಕೇ ಬೇಕಾಗುತ್ತದೆ. ಆಧುನಿಕ ತಂತ್ರಜ್ಞಾನದ ಫಲವಾಗಿ ಬಂದಿರುವ ಡಿಜಿಟಲ್ ಪ್ರಿಂಟ್‌ಗಳಿಂದ ಓರಿಜಿನಲ್ ಆಗಿ ರಚಿಸಲಾಗುವ ಕಲಾಕೃತಿಗಳ ಮಹತ್ವ ಕಡಿಮೆ ಆಗುವ ಸಾಧ್ಯತೆಗಳೇ ಇಲ್ಲ. ತಂತ್ರಜ್ಞ ಮ್ಯಾಕ್ಸಿಮಮ್ ಕಷ್ಟಪಟ್ಟರೂ ಮೂಲ ಕಲಾಕೃತಿಯ ಅರ್ಧದಷ್ಟು ಗುಣಮಟ್ಟ ತರುವುದೂ ಸಾಧ್ಯವಿಲ್ಲ. ಕ್ಯಾನ್ವಾಸ್ ಮೇಲಿನ ಥಿಕ್‌ನೆಸ್ ಕುಂಚದ ಬೀಸುಗಳು ಪ್ರಿಂಟ್‌ನಲ್ಲಿ ಬರುವುದೇ ಇಲ್ಲ. ಕಾಲದ ಪರೀಕ್ಷೆಯಲ್ಲಿ ಓರಿಜಿನಲ್ ಕಲಾಕೃತಿಗಳು ಉಳಿದುಕೊಳ್ಳುತ್ತವೆ.
ಪ್ರಿಂಟ್‌ಗಳಿಗೆ ಆ ಭಾಗ್ಯ ಇಲ್ಲ.
***
ಕಲಾಸಕ್ತರು ಮತ್ತು ಕಲಾವಿದರು ಮುಖಾಮುಖಿ ಆಗುವುದಕ್ಕೆ ಗ್ಯಾಲರಿಗಳು ಅನಿವಾರ್ಯ. ಕಲಾವಿದರಿಗೂ ತಮ್ಮ ಕಲಾಕೃತಿಗಳು ಒಳ್ಳೆಯ ಬೆಲೆಗೆ ಮಾರಾಟ ಆಗಬೇಕು ಮತ್ತು ಒಳ್ಳೆಯ ಸ್ಥಳದಲ್ಲಿ ಇರಬೇಕು ಅಂತ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಗ್ಯಾಲರಿಗಳನ್ನು ಆಶ್ರಯಿಸುತ್ತಾರೆ. ಕಲಾವಿದನಿಗೆ ಆರ್ಥಿಕ ಸಹಾಯ ದೊರೆತರೆ ಮತ್ತಷ್ಟು ಬೆಳೆಯುತ್ತಾನೆ. ಹಾಗೆ ಬೆಳೆಯುವುದರಿಂದ ಕಲಾಭಿವೃದ್ಧಿಯೂ ಆಗುತ್ತದೆ. ಸಂತೃಪ್ತ ಕಲಾವಿದನಿಂದ ಒಳ್ಳೆಯ ಕಲಾಕೃತಿಯ ಕೊಡುವುದಕ್ಕೆ ಪ್ರೇರಣೆ ಆಗುತ್ತದೆ.
***
ಗ್ಯಾಲರಿಗಳಲ್ಲಿ ಮಾತ್ರ ಕಲಾಕೃತಿಗಳನ್ನು ಚೆನ್ನಾಗಿ ನೋಡಲು ಸಾಧ್ಯ. ಕಲಾಕೃತಿ ಮತ್ತು ನೋಡುಗನ ನಡುವೆ ಅರ್ಥಪೂರ್ಣ ಸಂವಾದ ನಡೆಸುವುದಕ್ಕೆ ಗ್ಯಾಲರಿಗಳು ಕಾರಣವಾಗುತ್ತವೆ. ಚಿತ್ರಸಂತೆಯಲ್ಲಿ ಅಂತದಕ್ಕೆ ಅವಕಾಶ ಇರುವುದಿಲ್ಲ. ಅಲ್ಲಿ ಮಾರಾಟಕ್ಕೆ ಮಾತ್ರ ಆದ್ಯತೆ. ಖರೀದಿಸುವವ ಸಂತೆಯ ಹಾಗೆ ಚೌಕಾಶಿ ಮಾಡುವುದಕ್ಕಾಗಿಯೇ ಬಂದಿರುತ್ತಾನೆ. ಚಿತ್ರಸಂತೆಯಲ್ಲಿ ಕಲಾಕೃತಿ ನೋಡುವುದಕ್ಕೆ ಹೆಚ್ಚಿನ ಅವಕಾಶ ಇರುವುದಿಲ್ಲ. ಗ್ಯಾಲರಿಗಳಲ್ಲಿ ಒಳ್ಳೆಯ `ಅವಕಾಶ' ಇರುತ್ತದೆ. ಮಾರಾಟಕ್ಕೆ ಕೂಡ. ಸಂತೆಯಲ್ಲಿ ಮಾರಾಟಕ್ಕೆ ಮಾತ್ರವೇ ಆದ್ಯತೆ. ಪೇಂಟಿಂಗ್ ನೋಡುವುದಕ್ಕೆ ಅವಕಾಶ ಇರುವುದಿಲ್ಲ.
***
ಗ್ಯಾಲರಿಯವರು ನೀಡುವ ಸೂಚನೆಗಳು ಕಲಾವಿದನ ಮೇಲೆ ಅಂಕುಶ ಹೇರುವಂತಹವುಗಳು ಆಗಿರುವುದಿಲ್ಲ. ತಮಗೆ ಅಗತ್ಯವಿರುವ ಸೈಜಿನ ಬಗ್ಗೆ ಮಾತ್ರ ಅವರು ಸೂಚಿಸಬಹುದು. ಕಲಾವಿದನಿಗೆ ಶೈಲಿ, ತಂತ್ರ, ವಸ್ತುವಿನ ಮೇಲೆ ಸ್ವಾತಂತ್ರ್ಯ ಇರುತ್ತದೆ. ಸೈಜ್ ಮೇಲೆ ಮಾತ್ರ ಮಿತಿ ಇರುತ್ತದೆ. ಕೆಲವು ಗ್ಯಾಲರಿಗಳು ತಮಗೆ ಲ್ಯಾಂಡ್‌ಸ್ಕೇಪ್ ಮಾತ್ರ ಬೇಕು ಎಂದು ಕೇಳುತ್ತವೆ. ಅವರು ಸಹಜವಾಗಿಯೇ ಲ್ಯಾಂಡ್‌ಸ್ಕೇಪ್‌ ಮಾಡುವ ಕಲಾವಿದರನ್ನು ಸಂಪರ್ಕಿಸುತ್ತವೆ.

***
ಅನುಭವ- ಅನಿಸಿಕೆಗಳನ್ನು ರೇಖೆ, ಆಕಾರ, ಬಣ್ಣಗಳಲ್ಲಿ ಮೂಡಿಸುವ ಅಭಿವ್ಯಕ್ತಿ. ಭಾವಪ್ರಧಾನ ಆದಾಗಲೆ ನಿಜವಾದ ಕಲೆ. ಭಾವನೆಗಳ ಅಭಿವ್ಯಕ್ತಿ ಇಲ್ಲದ್ದಿದರೆ ಅದು ವಿದ್ಯೆ ಅಥವಾ ಕೌಶಲ್ಯ ಆಗುತ್ತದೆ. ಕೌಶಲ್ಯ ಕಲೆಯಲ್ಲ. ಹಾಗಂತ ಕೌಶಲ್ಯ ಬೇಕಿಲ್ಲ ಅಂತೇನು ಅಲ್ಲ. ಅಲ್ಫಾಬೆಟ್, ಗ್ರಾಮರ್ ಗೊತ್ತಿಲ್ಲದೇ ಅಥವಾ ಕಲಿಯದೇ ಪ್ರಯೋಗ ಮಾಡಲು ಆರಂಭಿಸಿದರೆ ಹೇಗೆ? ಮೂಲಪಾಠಗಳನ್ನು ಕಲಿಯಬೇಕು. ಬಹಳಷ್ಟು ಜನ ಪ್ರಯತ್ನ ಇಲ್ಲದೇ ಹೆಸರು ಬರಲಿ ಅಂದು ಕೊಳ್ಳುತ್ತಿದ್ದಾರೆ. ಅದು ಹೇಗೆ ಸಾಧ್ಯ? ಹೆಸರಿಗಾಗಿ ಕೆಲಸ ಮಾಡಬೇಕಿಲ್ಲ. ಬಹಳ ಪ್ರಯತ್ನ ಮಾಡಿದರ ಜನ ತಾವೇ ಬೆನ್ನತ್ತಿ ಬರುತ್ತಾರೆ. ಇದು ಈಗ ಬಹಳ ಜನರಿಗೆ ಬೇಕಿಲ್ಲ. ಅದಕ್ಕಾಗಿಯೇ ಅವಾರ್ಡ‌ ಬಂದ ಕಲಾವಿದರನ್ನು ಅನುಕರಣೆ ಮಾಡುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಬಸವೇಶ್ವರ ಮತ್ತು ಅವನ ಕಾಲ