ಸಂಗೀತ ಕೇಳುಗರಿಗಾಗಿ; ಪ್ರಶಸ್ತಿಗಾಗಿ ಅಲ್ಲ
ತಮ್ಮ ನೇರ, ನಿಷ್ಠುರ ಮಾತುಗಳಿಂದ ಸಾಂಸ್ಕೃತಿಕ ವಲಯದ ನೈತಿಕ ಎಚ್ಚರವನ್ನು ಜಾಗೃತವಾಗಿಡುತ್ತಿದ್ದ ಉಸ್ತಾದ್ ವಿಲಾಯತ್ ಖಾನ್ ಹಿಂದೂಸ್ತಾನಿ ಸಂಗೀತ ಪರಂಪರೆಯಲ್ಲಿ ಮೂಡಿಬಂದ ಅಪರೂಪದ ನಕ್ಷತ್ರಗಳಲ್ಲಿ ಒಬ್ಬರು. `ಬೀನ್‌ಕಾರ್‍' ಶೈಲಿಯಲ್ಲಿ ಪ್ರಚಲಿತವಾಗಿದ್ದ ಸಿತಾರ ವಾದನ ಪರಂಪರೆಗೆ `ಗಾಯಕಿ ಅಂಗ್' ಸೇರಿಸಿದ ಹಿರಿಮೆ ಇವರದು. ಸಿತಾರ್ ವಾದನದಲ್ಲಿ ಗಾಯನ ಶೈಲಿ ಅಳವಡಿಸಿ ಅದಕ್ಕೆ ಅಗತ್ಯವಾಗಿದ್ದ ಸಿತಾರನ್ನು ರೂಪಿಸಿಕೊಂಡವರು.
ನಾಲ್ಕು ತಲೆಮಾರುಗಳ ಸಂಗೀತ ಪರಂಪರೆ ಇರುವ ಕುಟುಂಬದಲ್ಲಿ ಜನಿಸಿದ ವಿಲಾಯತ್ ತಂದೆ ಉಸ್ತಾದ್ ಇನಾಯತಖಾನ್ರಲ್ಲಿ ಸಿತಾರ್ ವಾದನ ಕಲಿಯಲು ಆರಂಭಿಸಿದರು. ವಿಲಾಯತ್ ಬಾಲಕರಾಗಿದ್ದಾಗ ಒಮ್ಮೆ ಅವರ ತಂದೆ ಸಿತಾರ್ ವಾದನ ಪ್ರಸ್ತುತ ಪಡಿಸುತ್ತಿರುವಾಗ `ಕಣ್ಮುಂದೆ ಹಳದಿ ಬಣ್ಣವೇ ಹರಡಿ'ದಂತಾಗಿದ್ದನ್ನು ತಂದೆಗೆ ಹೇಳಿದರು. ಅದಕ್ಕೆ ಇನಾಯತಖಾನರು `ಬುದ್ದು, ನಾನೀಗ ನುಡಿಸಿದ್ದ `ಬಸಂತ್' ರಾಗ' ಎಂದು ಹೇಳಿದ್ದರು. ಸಂಗೀತದಲ್ಲಿ ಬಣ್ಣದ ಛಾಯೆ ಕಂಡ ವಿಲಾಯತರಿಗೆ ತಂದೆಯಿಂದ ಹೆಚ್ಚಿನ ಸಿತಾರ್ ಶಿಕ್ಷಣ ದೊರೆಯಲಿಲ್ಲ. ಕೇವಲ ಹತ್ತು ವರ್ಷದವರಾಗಿದ್ದಾಗಲೇ ಪಿತೃವಿಯೋಗಕ್ಕೆ ಒಳಗಾಗಬೇಕಾಯಿತು. ವಿಧಿಯಾಟದಿಂದ ನೊಂದ ವಿಲಾಯತರಿಗೆ ಅಜ್ಜ ಉಸ್ತಾದ್ ಬಂದೆ ಹುಸೇನ್ ಖಾನ್ (ತಾಯಿಯ ತಂದೆ) ಮತ್ತು ಸೋದರ ಮಾವ ಉಸ್ತಾದ್ ವಹೀದ್‌ಖಾನ್‌ ಆಶ್ರಯ ನೀಡಿದರು. ಮಳೆ,ಚಳಿ, ಬಿಸಿಲುಗಳಿಂದ ರಕ್ಷಣೆ ಕೊಡದ ಟಿನ್ ಮನೆಯಲ್ಲಿ ವಾಸಿಸುತ್ತಿದ್ದ ವಿಲಾಯತರಿಗೆ ಹೊಟ್ಟೆಯ ಹಸಿವಿಗಿಂತ ಸಂಗೀತದ ಹಸಿವು ಹೆಚ್ಚಿತ್ತು. ಅವರ ಹಸಿವು ತಣಿಸುವುದಕ್ಕಾಗಿಯೇ ಮಾವ ವಹೀದ್‌ ಖಾನ್ ಹೈದರಾಬಾದನಿಂದ ದೆಹಲಿಗೆ ಬಂದ ಗಾಯನ ಕಲಿಸುತ್ತಿದ್ದರು. ಆಗಲೇ ಸತತ ಕಠಿಣ ಪರಿಶ್ರಮದಿಂದ ‌ ಸುರ್‌ ಬಾಹರ್‍ ವಾದನ ಮತ್ತು ಗಾಯನದಲ್ಲಿ ಪರಿಣತಿ ಪಡೆದರು.
ಆಗಲೇ ಅವರಿಗೆ ಕಲ್ಕತ್ತಾದಲ್ಲಿ ಕಛೇರಿ ನೀಡುವ ಅವಕಾಶವೂ ದೊರಕಿತು. ಆಗ ಶ್ರೋತ್ರುಗಳಿಂದ ಅಪೂರ್ವ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ಕಛೇರಿಯಲ್ಲಿ ತಾನು ಪ್ರಸ್ತುತ ಪಡಿಸಿದ ಆಲಾಪದ ಬಗ್ಗೆ ಅಲ್ಲಿ ದೊರೆತ ಮೆಚ್ಚುಗೆ ಬಗ್ಗೆ ವಿಲಾಯತರು ತಮ್ಮ ತಾಯಿಗೆ ಸಂಭ್ರಮ- ಸಂತಸ- ಹೆಮ್ಮೆಯಿಂದ ವಿಸ್ತರಿಸಿದರು. ಅದಕ್ಕೆ ನಿರಾಸಕ್ತಿಯ ಪ್ರತಿಕ್ರಿಯೆ ತೋರಿದ ತಾಯಿ `ಇನ್ಮುಂದೆ ಗಾಯನ ಮಾಡದಂತೆ' ತಾಕೀತು ಮಾಡಿದರು, ಅಷ್ಟೇ ಅಲ್ಲ, ಅದಕ್ಕೆ ಕಾರಣ ಕೂಡ ನೀಡಲಿಲ್ಲ. ತಾಯಿಯ ಬಗ್ಗೆ ಅಪಾರ ಗೌರವ- ವಿಶ್ವಾಸವಿದ್ದ ವಿಲಾಯತರು ಸಿತಾರ್ ಕೈಗೆತ್ತಿಕೊಂಡರು ಅದನ್ನವರು ಕೊನೆಯ ಉಸಿರು ಇರುವವರೆಗೆ ಬಿಡಲಿಲ್ಲ. ತನ್ನ ತವರು ಮನೆಯ ಗಾಯನ ಪರಂಪರೆಯನ್ನು ಮಗ ಮುಂದುವರೆಸುವ ಬದಲು ಗಂಡನ ಮನೆಯ ಸಿತಾರ್‍ ವಾದನ ಪರಂಪರೆಗೆ ಹೊಸ ಆಯಾಮ ನೀಡಲಿ ಎಂಬ ಕಾರಣದಿಂದ ಮಗನಿಗೆ ಗಾಯನ ತೊರೆಯುವಂತೆ ತಿಳಿಸಿದ್ದಾಗಿ ಬಹಳ ದಿನಗಳ ನಂತರ ತಾಯಿ ವಿವರಿಸಿದರು.
ಪ್ರೇರಣೆಯಿಂದಲೇ ವಿಲಾಯತರು ಸಿತಾರ್ ವಾದನದಲ್ಲಿ `ಗಾಯಕಿ'ಯನ್ನು ಕೇಳಿಸುವ ಅಭೂತಪೂರ್ವ ಆಯಾಮ ನೀಡಿರಬೇಕು. ಕಲಿತ ಗಾಯನ ‌ಸಿತಾರ್‌ ವಾದನದಲ್ಲಿ ಬಳಸಿಕೊಂಡರು. ಮತ್ತು ತಾಯಿ- ತಂದೆಯ ಸಂಗೀತ ಪರಂಪರೆಯನ್ನು ಬೆಳೆಸಿದರು- ವಿಸ್ತರಿಸಿದರು.
ಕೇಳುಗನನ್ನು ತಲುಪುವುದಕ್ಕಾಗಿ, ಪಾಶ್ಚಾತ್ಯರನ್ನು ಮೆಚ್ಚಿಸುವುದಕ್ಕಾಗಿ ಸಂಗೀತವನ್ನು ತೆಳುಗೊಳಿಸುವುದನ್ನು ಕಟುವಾಗಿ ವಿರೋಧಿಸುತ್ತಿದ್ದ ಅವರು ಗಾಯಕ/ವಾದಕರು ತಮ್ಮ ಕಲೆಯ ಪ್ರಸ್ತುತಿಯ ಎತ್ತರಕ್ಕೆ ಕೇಳುಗನನ್ನು ಏರಿಸಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು. ಅವರ ಪ್ರತಿಭೆಗೆ ತಕ್ಕ ಗೌರವ -ಸ್ಥಾನಮಾನ ವಿಲಾಯತರಿಗೆ ಸಿಕ್ಕಲಿಲ್ಲ. ಅದಕ್ಕಾಗಿ ನೊಂದಿದ್ದ ಅವರು ಸಿತಾರ್‌ ವಾದನಕ್ಕಾಗಿ `ವಿಶ್ವವಿಖ್ಯಾತ' ಆಗಿರುವ ‌ರವಿಶಂಕರ್‌ಗೆ ತಾಕತ್ತಿದ್ದರೆ ನನ್ನೊಂದಿಗೆ ಜುಗಲ್ಬಂದಿ ನಡೆಸಲಿ ಎಂದು ಸವಾಲು ಹಾಕಿದ್ದರು. ‌ರವಿಶಂಕರ್‌ಗೆ `ಭಾರತರತ್ನ' ನೀಡಿದಾಗ `ಇನ್ಮುಂದೆ ಯಾವುದೇ ಪ್ರಶಸ್ತಿ ಸ್ವೀಕರಿಸುವುದಿಲ್ಲ' ಎಂದು ಖಂಡತುಂಡವಾಗಿ ಹೇಳಿದ್ದರು. ಸಂಗೀತ ಇರುವುದು ಕೇಳುಗರಿಗಾಗಿಯೇ ಹೊರತು ಪ್ರಶಸ್ತಿ- ಪುರಸ್ಕಾರಗಳಿಗಾಗಿ ಅಲ್ಲ ಎಂದು ನಂಬಿದ್ದ ಮಹಾನ್ ‌ಸಿತಾರ್‌ ವಾದಕ.
ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ

ಸುರಪುರದಲ್ಲಿ ಅವಧೂತರ ’ಅಂಬಾ’ಗೆ ನಿತ್ಯ ಪೂಜೆ

ಎಸ್.ಎಂ. ಪಂಡಿತ್