ಅಂಬಿಕಾತನಯದತ್ತ ಅಲ್ಲ; ಪತ್ರಕರ್ತ ಬೇಂದ್ರೆ
ಪಟ್ಟ ಪಾಡನ್ನೇ ಹಾಡಾಗಿಸಿ 'ಕಾವ್ಯೋದ್ಯೋಗ' ಮಾಡಿದ ವರಕವಿ ದ.ರಾ. ಬೇಂದ್ರೆ ತುತ್ತಿನಚೀಲ ತುಂಬಿಸಿಕೊಳ್ಳುವುದಕ್ಕಾಗಿ- ಹವ್ಯಾಸಕ್ಕಾಗಿ ಪತ್ರಿಕೆಗಳನ್ನು ಆರಂಭಿಸಿ- ಸಂಪಾದಕರಾಗಿ ಪತ್ರಕರ್ತರಾಗಿ ಕೆಲಸ ಮಾಡಬೇಕಾಯಿತು. ಚಲನಶೀಲ ಪ್ರತಿಭೆ ತನ್ನತನ ಕಂಡುಕೊಳ್ಳಲು ಹಲವಾರು ಸಾಧ್ಯತೆಗಳನ್ನು ಪ್ರಯತ್ನಿಸುತ್ತಿರುತ್ತದೆ. ನೆಲೆ ಸಿಕ್ಕ ತಕ್ಷಣ ಅಲ್ಲಿ ತಳ ಊರುತ್ತದೆ. ಆದರೆ, ಬೇಂದ್ರೆಯವರು ಕಾವ್ಯಲೋಕದಲ್ಲಿ ಗತಿ ಸಿಕ್ಕ ಮೇಲೂ `ಹೊಟ್ಟೆಪಾಡಿಗಾಗಿ' ಸಾಹಿತ್ಯ ಪತ್ರಿಕೋದ್ಯಮವನ್ನು ಅವಲಂಬಿಸಿದ್ದರು ಎಂಬುದು ಕುತೂಹಲ ಹುಟ್ಟಿಸುವ ಸಂಗತಿ.
ಕೈಬರಹದ ಪತ್ರಿಕೆಗಳಾದ 'ಕೊಳಲು', 'ಗೆಳೆಯ', `ನಸುಕು' ಮತ್ತು ಮುದ್ರಣ ಕಂಡ 'ಸ್ವಧರ್ಮ'ವನ್ನು ಕಾವ್ಯಾಸಕ್ತಿ ಮತ್ತು ಹವ್ಯಾಸಕ್ಕಾಗಿ ಆರಂಭಿಸಿದ್ದ ಬೇಂದ್ರೆಯವರು ಮಾಸ್ತಿಯವರ ಸಹಾಯದಿಂದ `ಜೀವನ' ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದ್ದರು. '1940ರ ವರೆಗೆ ಎಲ್ಲೂ ಕೆಲಸ ಸಿಕ್ಕದೆ ಅಣ್ಣ ಮಾಸ್ತಿಯವರ ವಾತ್ಸಲ್ಯದ ಬೆಂಬಲದಿಂದ ಜೀವನ ಸಂಪಾದಕನೆಂದು ಗೌರವದಿಂದ ಅಲೆದಾಡಿದೆ'' ಎಂದು ತಮ್ಮ ಆತ್ಮಕತೆ `ಕಾವ್ಯೋದ್ಯೋಗ'ದಲ್ಲಿ ಬೇಂದ್ರೆ ಬರೆದಿದ್ದಾರೆ. ಪತ್ರಿಕೆಗಳನ್ನು ನಡೆಸಿದ ಅವಧಿಯಲ್ಲಿ ಬೇಂದ್ರೆಯವರು ವೈವಿಧ್ಯಮಯವಾದ ಅಂಕಣಗಳನ್ನು ಆರಂಭಿಸಿ, ಇಂಗ್ಲಿಷ್ ಮತ್ತಿತರ ಭಾಷೆಯ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸುವ ಮೂಲಕ `ಸಾಹಿತ್ಯ ಪತ್ರಿಕೋದ್ಯಮ'ಕ್ಕೆ ಹೊಸತನ- ಚೈತನ್ಯ ತುಂಬಿದರು ಎಂಬುದರಲ್ಲಿ ಎರಡು ಮಾತಿಲ್ಲ.
’ಕರ್ನಾಟಕದ ಸರ್ವಾಂಗ ವಿಚಾರ ಪರಿಪೂರ್ಣವಾದ ಮಾಸಪತ್ರಿಕೆ' ಎಂದು ಕರೆದುಕೊಳ್ಳುತ್ತಿದ್ದ `ಜೀವನ' ಪತ್ರಿಕೆಯು ಸಾಹಿತ್ಯ ಮಾತ್ರವಲ್ಲದೆ ಪತ್ರಿಕೋದ್ಯಮದ ಸಾಧ್ಯತೆಗಳನ್ನು ವಿಸ್ತರಿಸಿತು. ಬೇಂದ್ರೆಯವರ ಮಾಂತ್ರಿಕ ಸ್ಪರ್ಶವನ್ನು ಅವರ ಪತ್ರಿಕೋದ್ಯಮದ ಪ್ರಯತ್ನಗಳಲ್ಲೂ ಗುರುತಿಸಬಹುದಾಗಿದೆ. 'ಜೀವನ' ಮೊದಲ ಸಂಚಿಕೆ ನವಂಬರ್ 4, 1939 ರಲ್ಲಿ `ನಮ್ಮ ಮಾತು' ಸಂಪಾದಕೀಯದಲ್ಲಿ ಪತ್ರಿಕೆಯ ಉದ್ದೇಶಗಳನ್ನು ಹೀಗೆ ವಿವರಿಸಿದ್ದಾರೆ. `ವಿಜಯದಶಮಿಯ ಸುಮುಹೂರ್ತದಲ್ಲಿ ಜೀವನವು ಮೊದಲ ಹೆಜ್ಜೆಯಿಕ್ಕುತ್ತಿದೆ. ನಮ್ಮ ಗೆಳೆಯರೊಡಗೂಡಿ ಕನ್ನಡ ನಾಡಹಬ್ಬವನ್ನು ಹೂಡಿ ಹನ್ನೆರಡು ವರ್ಷಗಳಾದವು. ಇಂದು ಈ `ಜೀವನ'ದ ಗಣೆಯನ್ನು ಹೂಡಿ, ನವದೃಷ್ಟಿಯ ಡೋಲು ಹೊಡೆದು, ಕನ್ನಡ ಕುಲದಿದಿರು ನಾವು ನಿಂತಿದ್ದೇವೆ.
'ಸಮರಸವೇ ಜೀವನ' ಎಂದು ನಮ್ಮ ಆಂತರ್ಯ ಸಾರಿದರೂ 'ಜೀವೋ ಜೀವಸ್ಯ ಜೀವನಂ' ಎಂಬ ಮೆಟ್ಟಿಲನ್ನು ನಾವು ದಾಟಿಲ್ಲವೆಂಬುದನ್ನು ನಾವು ಪೂರ್ಣ ಅರಿತಿದ್ದೇವೆ. ಜೀವನ ಕೋಲಾಹಲದ ರಂಗದಲ್ಲಿ ಹೊಟ್ಟೆಯ ಡೋಲಿನ ಸಪ್ಪಳವೇ ಹೆಚ್ಚಾಗದೆ ನಮ್ಮ ದೊಂಬರಾಟದಿಂದ ಜನಮನಕ್ಕೆ ರಂಜನೆಯೂ ಉತ್ಸಾಹವೂ ಸಾಕಷ್ಟು ದೊರೆತು ನಮ್ಮ ಆಟ ನಡೆದಷ್ಟು ಕಾಲವಾದರೂ ನಮ್ಮ ನೋಟಕರ ಸೌಹಾರ್ದ ಸಹಾನುಭೂತಿ ಉಳಿದರೆ ಅದೇ ಜೀವನದ ಪರಮಕಾರುಣ್ಯವೆಂದು ನಾವು ನಂಬಿರುವೆವು. ಆ ಅಪಾರ ಕಾರುಣ್ಯಕ್ಕೆ ಯಾವಾಗಲೂ ಜಯವಿರಲಿ'
ಸಂಸ್ಕೃತಿಯ ವಿನಯ ದೃಷ್ಟಿ, ಸಾಹಿತ್ಯದ ರಸದೃಷ್ಟಿ, ಕಲೆಯ ಶೃಂಗಾರದೃಷ್ಟಿ, ಧರ್ಮಶಾಸ್ತ್ರದ ವಿವೇಕದೃಷ್ಟಿ, ಇತಿಹಾಸದ ಪುರುಷಾರ್ಥದೃಷ್ಟಿ, ತತ್ವಜ್ಞಾನದ ಪರಮಾರ್ಥದೃಷ್ಟಿ, ವಿಜ್ಞಾನದ ಅಭ್ಯುದಯದೃಷ್ಟಿ, ಅರ್ಥಶಾಸ್ತ್ರದ ವ್ಯವಹಾರ ದೃಷ್ಟಿ, ಮಹಾನುಭಾವರ ಸಮರಸದೃಷ್ಟಿ ಇಂತು ಕಂಡಾಗಳೆ 'ಜೀವನ' ಅದ್ಭುತ ರಮ್ಯತೆಯ ಅನುಭವಕ್ಕೆ ಬರುವುದು' ಎಂಬ ಧ್ಯೇಯ ಹೊಂದಿದ್ದ `ಜೀವನ' ಧಾರವಾಡದ ಸಾಧನ ಮುದ್ರಣಾಲಯದಲ್ಲಿ ಪ್ರಕಟವಾಗುತ್ತಿತ್ತು. ಮುದ್ರಣದ ಸಾಧ್ಯತೆಗಳು ದುರ್ಬಲವಾಗಿದ್ದ ದಿನಗಳಲ್ಲಿ ’ಜೀವನ’ದ ಮುಖಪುಟ ತ್ರಿವರ್ಣದಲ್ಲಿ ಪ್ರಕಟವಾಗುತ್ತಿತ್ತು. ಪ್ರತಿ ಬಣ್ಣಕ್ಕೂ ಪ್ರತ್ಯೇಕ ಬ್ಲಾಕ್ ಬಳಸಬೇಕಾಗಿದ್ದ ದಿನಗಳಲ್ಲಿಯೂ ಪತ್ರಿಕೆ ಆಕರ್ಷಕವಾಗಿ ಮುದ್ರಿತವಾಗುತ್ತಿತ್ತು.
`ಜೀವನ' ಸೇರಿದಂತೆ ತಾವು ಸಂಪಾದಕರಾಗಿದ್ದ ಎಲ್ಲ ಪತ್ರಿಕೆಗಳಲ್ಲಿ ಕವಿತೆಗಳನ್ನು `ಅಂಬಿಕಾತನಯದತ್ತ' ಕಾವ್ಯನಾಮದಲ್ಲಿ ಪ್ರಕಟಿಸುತ್ತಿದ್ದ ಬೇಂದ್ರೆ ಅವರು ಗದ್ಯಲೇಖನ ಮತ್ತು ಸಂಪಾದಕೀಯ ಬರವಣಿಗೆಗಳಲ್ಲಿ `ಶ್ರೀ ದ.ರಾ.ಬೇಂದ್ರೆ, ಎಂ.ಎ.' ಎಂದು ಕಾಣಿಸುತ್ತಿದ್ದರು. ಸಾಂಗಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ವ್ಹಾಯಿಸ್ ಪ್ರಿನ್ಸಿಪಾಲರಾಗಿದ್ದ ವಿ.ಕೆ. ಗೋಕಾಕರು `ಬಿಡಿನುಡಿಗಳು' ಎಂಬ ಅಂಕಣ ಬರೆಯುತ್ತಿದ್ದರು. ಪತ್ರಿಕೆಯ ಎರಡನೇ ಸಂಚಿಕೆಯನ್ನೇ `ಗೀತಾ ವಿಶೇಷ'ವನ್ನಾಗಿಸಲಾಗಿತ್ತು. ಭಗವದ್ಗೀತೆಯ ಬಗ್ಗೆ ಹಲವು ಅಪೂರ್ವ ಒಳನೋಟಗಳನ್ನು ನೀಡುವ ಲೇಖನಗಳನ್ನು ಪ್ರಕಟಿಸಲಾಗಿತ್ತು. ಐದನೇ ಸಂಚಿಕೆ `ಮಾಸ್ತಿ ವಿಶೇಷಾಂಕ'ದಲ್ಲಿ ಮಾಸ್ತಿಯವರ ವ್ಯಕ್ತಿತ್ವ ಮತ್ತು ಸಾಹಿತ್ಯ ಬಿಂಬಿಸುವ ಲೇಖನಗಳ ಜೊತೆ ನಾಲ್ಕಾರು ಸುಂದರ ಭಾವಚಿತ್ರಗಳನ್ನೂ ಪ್ರಕಟಿಸಲಾಗಿತ್ತು. 'ಇಂದಿನ ಕರ್ನಾಟಕ' ಅಂಕಣದಲ್ಲಿ ಕರ್ನಾಟಕದ ನಗರ, ಪಟ್ಟಣ, ಹಳ್ಳಿಗಳ ಪರಿಚಯ ನೀಡಲಾಗುತ್ತಿತ್ತು ಎಂಬ ಅಂಶ ಗಮನಾರ್ಹವಾದದ್ದು.
'ಪ್ರಜಾವಾಣಿ'ಯಲ್ಲಿ ಈಗ ಪ್ರಕಟವಾಗುವ `ಇಗೋ ಕನ್ನಡ' ಅಂಕಣದ ಮಾದರಿಯ 'ಶಬ್ದಶೋಧ'ವನ್ನು 1940ರಲ್ಲಿಯೇ ಆರಂಭಿಸಲಾಗಿತ್ತು. ರಂ.ಶ್ರೀ.ಮುಗಳಿಯವರು ಉತ್ತರಿಸುತ್ತಿದ್ದ ಆ ಅಂಕಣದಲ್ಲಿ ಇಂಗ್ಲಿಷ್ ಭಾಷೆಯ ಪದಗಳಿಗೆ, ಕನ್ನಡದ ಪ್ರತಿಶಬ್ದಗಳನ್ನೂ, ಕನ್ನಡ ಶಬ್ದ ಮತ್ತು ವಾಕ್ಯರೂಪಗಳ ಮೂಲಚರಿತ್ರೆ, ವ್ಯುತ್ಪತ್ತಿ, ಹೊಸರಚನೆ, ಅರ್ಥಭೇದಗಳನ್ನೂ, ಕನ್ನಡ ಮತ್ತು ವಿವಿಧ ಭಾಷೆಗಳಲ್ಲಿಯ ಅನ್ಯೋನ್ಯ ಪ್ರಭಾವವನ್ನು ಚರ್ಚಿಸಲಾಗುತ್ತಿತ್ತು. ಬೇಂದ್ರೆಯವರು ಹೊಸ ಲೇಖಕರು ಮತ್ತು ಕವಿಗಳಿಗೆ ಅವಕಾಶ ನೀಡುತ್ತಿದ್ದ `ಜೀವನ'ದಲ್ಲಿ ಭಾಗಶಃ ಕವಿತೆ ಪ್ರಕಟಿಸಿ, ಸಂಕಲನ ತರುವ ಬಗ್ಗೆ `ಇನ್ನೂ ಪರಿಣತರಾಗುವವರೆಗೆ ತಡೆಯುವುದು ಲೇಸು ಎಂದು ನಾನು ಸೂಚಿಸುತ್ತೇನೆ' ಎಂಬ ಅಡಿಟಿಪ್ಪಣಿ ಹಾಕುತ್ತಿದ್ದದು ಗಮನೀಯ ಅಂಶ.
`ಜೀವನ' ಒಂದು ವರ್ಷ ಪೂರ್ತಿಗೊಳಿಸಿದಾಗ ಪ್ರಕಟಿಸಿದ `ಸಂಪಾದಕರ ಕೈಫಿಯತ್ತಿ'ನಲ್ಲಿ `ಸರ್ವಾಂಗ ವಿಚಾರಪೂರ್ಣ ಪತ್ರಿಕೆಯಾಗಬೇಕೆಂದು `ಜೀವನ'ವು ಪ್ರಯತ್ನಿಸುವುದನ್ನು ನಮ್ಮ ವಾಚಕರು ಮನಗಂಡಿರಬೇಕು. ಆದರೆ, ಅದರ ವಿಚಾರ ಪದ್ಧತಿಯೂ, ಶೈಲಿಯೂ ಜನಸಾಮಾನ್ಯಕ್ಕೆ ಸುಬೋಧವಾಗಿಲ್ಲವೆಂದು ಹಲವರಿಗೆ ತೋರಿದ್ದರೆ ಆಶ್ಚರ್ಯವಿಲ್ಲ. ಜನತೆಯ ಮನರಂಜನೆಗೋಸ್ಕರ ಸುಲಭತೆಯ ಗುರಿಯನ್ನೇ ಇಟ್ಟುಕೊಂಡು ಕರ್ನಾಟಕದ ಕೆಲವು ಪತ್ರಿಕೆಗಳು ಹೊರಟಿರುತ್ತವೆ, ಅವುಗಳಿಗೆ ಸಾಕಷ್ಟು ಯಶಸ್ಸು ದೊರೆತಿದೆ. ಜೀವನವು ಅಂಥ ಧ್ಯೇಯವನ್ನು ಇಟ್ಟುಕೊಂಡಿಲ್ಲ. ಅದರ ಮಟ್ಟವು ಎತ್ತರದ್ದಾಗುವುದೆಂದರೆ ಅದು ಅದರ ಧ್ಯೇಯ ಅಪರಿಹಾರ್ಯ ಎನ್ನಬೇಕಾದೀತು. ಆದರೆ ನಮ್ಮ ವಾಚಕರಿಗೆ ನಾವು ನಮ್ಮ ಆಕಾಂಕ್ಷೆಯನ್ನು ತಿಳಿಸಲು ಬಯಸುತ್ತೇವೆ. `ಜೀವನ'ವು ಉನ್ನತವಾದ ವಿಚಾರ, ಉತ್ತಮ ಕಲಾಕೃತಿ ಇವನ್ನು ಸಾಧ್ಯವಾದಷ್ಟು ಸುಲಭವಾದ ಮತ್ತು ಪ್ರಸನ್ನವಾದ ರೀತಿಯಲ್ಲಿ ಕನ್ನಡ ಜನತೆಗೆ ಸಲ್ಲಬೇಕೆಂದು ಕೋರುತ್ತಿದೆ' ಎಂದು ಬರೆದಿದ್ದರು.
'ಜೀವನ' ಪತ್ರಿಕೆಯ ಹಳೆಯ ಸಂಚಿಕೆಗಳನ್ನು ನೋಡಿದರೆ ಕನ್ನಡದ ನವೋದಯ ಸಾಹಿತ್ಯದ ತುಂಬು ಯೌವನದ ಪರಿಚಯವಾಗುತ್ತದೆ. ಕಾವ್ಯ ಮತ್ತು ವಿಮರ್ಶೆಗಳ ಉತ್ಕೃಷ್ಟವೆನ್ನಬಹುದಾದ ಕೃತಿಗಳು ಆಗ 'ಜೀವನ'ದಲ್ಲಿ ಪ್ರಕಟವಾದವು. ಅದಕ್ಕೂ ಮುನ್ನ ಪತ್ರಿಕೆ ಆರಂಭಿಸುವ ಅಥವಾ ಸಂಪಾದಕತ್ವ ವಹಿಸುವ ಪ್ರಯತ್ನಗಳನ್ನು ಬೇಂದ್ರೆ ನಡೆಸಿದ್ದರು. ಮುದ್ರಣ ಸೌಲಭ್ಯದ ಕೊರತೆ ಮತ್ತು ಹಣಕಾಸಿನ ಅಡಚಣೆಯಿಂದಾಗಿ ಕೈ ಬರಹದ ಪತ್ರಿಕೆ ಹೊರತರಲಾಯಿತು.
ಬೇಂದ್ರೆಯವರು ಪದವಿ ಶಿಕ್ಷಣಕ್ಕಾಗಿ 1914ರಿಂದ 1918ರ ವರೆಗಿನ ಅವಧಿಯಲ್ಲಿ ಪುಣೆಯಲ್ಲಿದ್ದರು. ಕನ್ನಡ ಮತ್ತು ಮರಾಠಿ ಸಾಹಿತ್ಯ ಅಭಿರುಚಿ ಉಳ್ಳವರನ್ನು ಆಯ್ಕೆ ಮಾಡಿ `ಶಾರದಾ ಮಂಡಲ' ಎಂಬ ಸ್ನೇಹಿತರ ಗುಂಪು ಆರಂಭವಾಯಿತು. ಗೆಳೆಯರೆಲ್ಲ ಸೇರಿ ತಾವು ಮಾಡುತ್ತಿದ್ದ ರಚನೆ, ವಾಚನ, ಚರ್ಚೆಗಳನ್ನು `ಕೊಳಲು' ಎಂಬ ಕೈ ಬರಹದ ಪತ್ರಿಕೆಯಲ್ಲಿ ದಾಖಲಿಸುತ್ತಿದ್ದರು.
ಬಿ.ಎ. ಪದವಿಯ ನಂತರ ಧಾರವಾಡದ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಬೇಂದ್ರೆಯವರು ಶಿಕ್ಷಕರಾದ ಮೇಲೆಯೂ ಅವರಿಗೆ ಸಾಹಿತ್ಯ ಪತ್ರಿಕೆಯ ಗೀಳು ಬಿಟ್ಟು ಹೋಗಲಿಲ್ಲ. ಆ ಅವಧಿಯಲ್ಲಿ ಎಳೆಯ ಸ್ನೇಹಿತರನ್ನು ಸೇರಿಸಿ ಅವರಲ್ಲಿ ಕಾವ್ಯ- ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವುದಕ್ಕಾಗಿ `ಜೇನುಹುಟ್ಟು' ಮತ್ತು `ಗೆಳೆಯ' ಎಂಬ ಕೈಬರಹದ ಪತ್ರಿಕೆಗಳನ್ನು ಆರಂಭಿಸಿದರು. ಶಾಲೆಯ ವರ್ಗಗಳಿಗೆ ಮೀಸಲಾಗ್ದಿದ ಈ ಪತ್ರಿಕೆಗಳು ವಿದ್ಯಾರ್ಥಿಗಳ ಕವನ, ಕಥೆ, ಲೇಖನಗಳನ್ನು ಒಳಗೊಂಡಿರುತ್ತಿದ್ದವು.
1924ರಲ್ಲಿ ಗೆಳೆಯರ ಗುಂಪಿನ ಸ್ನೇಹಿತರು ಸೇರಿ ಹೊರತಂದ `ಗೆಳೆಯ' ಕೈಬರಹದ ಪತ್ರಿಕೆಗೆ ಬೇಂದ್ರೆಯವರೇ ಸಂಪಾದಕರಾಗಿದ್ದರು. ಆಗ ಬಂದ ಮೂರು ಸಂಚಿಕೆಗಳಲ್ಲಿ ವಿನೀತ ರಾಮಚಂದ್ರರಾವ್, ಅಂಬಿಕಾತನಯದತ್ತ, ಹಲಸಂಗಿಯ ಗೆಳೆಯರು, ಪ್ರಹ್ಲಾದ ನರೇಗಲ್ಲ, ಚಿದಂಬರ, ನಾರಾಯಣ ಸಂಗಮರ ಕವನ ಮತ್ತು ಲೇಖನ ಪ್ರಕಟವಾಗಿದ್ದವು. ಇದೇ ಸಮಯದಲ್ಲಿಯೇ 'ಗೆಳೆಯರ ಗುಂಪು' ಹೊರತಂದ `ನಸುಕು' ಎಂಬ 168 ಪುಟಗಳ ಕೈಬರಹದ ಪತ್ರಿಕೆಯಲ್ಲಿ ಒಂಬತ್ತು ಕವಿಗಳ ಕವನಗಳನ್ನು ಸೇರಿಸಲಾಗಿತ್ತು. ಇವುಗಳ ಪ್ರೇರಣೆಯಿಂದ 1926ರಲ್ಲಿ ಗುಂಪಿನ ಲೇಖಕರು `ಸ್ವಧರ್ಮ' ಎಂಬ ಪತ್ರಿಕೆ ಆರಂಭಿಸಿದರು. ಸಹಜವಾಗಿಯೇ ಈ ಪತ್ರಿಕೆಗೂ ಬೇಂದ್ರೆಯವರು ಸಂಪಾದಕರಾಗಿದ್ದರು. ಸರಿ ಸುಮಾರು ಒಂದು ವರ್ಷ ಕಾಲ ಈ ಪತ್ರಿಕೆ ಪ್ರಕಟವಾಯಿತು. 'ಸ್ವಧರ್ಮ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ `ಬೆಳಗು' ಕವಿತೆ ತಮ್ಮ ಲಕ್ಷ್ಯವನ್ನು ಸೆಳೆಯಿತು ಎಂದು ಮಾಸ್ತಿ ಅವರು `ನಾದಲೀಲೆ'ಯ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.
ಆಲೂರು ವೆಂಕಟರಾಯರು ಆರಂಭಿಸಿದ ’ಜಯಕರ್ನಾಟಕ’ ಪತ್ರಿಕೆಯ ನಿರ್ವಹಣೆಯನ್ನು ಗೆಳೆಯರು ಗುಂಪು 1929ರಲ್ಲಿ ವಹಿಸಿಕೊಂಡಿತು.
'ಜಯಕರ್ನಾಟಕ'ವೆನ್ನುತ ಗೆಳೆಯರ
ಕನ್ನಡದಾಸೆಯು ಗುಡಿಕಟ್ಟಿತು.
ಮುಂದಿನ ಏನೇನೊ ಕನಸಿನ ಕಳಶ ಗೋ-
ಪುರಗಳ ಕಲ್ಪನೆ ಮೇಲಿಟ್ಟಿತು.
ಎಂದು ಬೇಂದ್ರೆ ಆತ್ಮಕಥನಾತ್ಮಕ `ಸಖೀಗೀತ'ದಲ್ಲಿ ದಾಖಲಿಸಿದ್ದಾರೆ.
ಜಿ.ಬಿ.ಜೋಷಿಯವರು ವ್ಯವಹಾರಿಕವಾಗಿ `ಜಯಕರ್ನಾಟಕ'ದ ಪ್ರಕಟಣೆಯ ವ್ಯವಸ್ಥೆಯಲ್ಲಿ ನೆರವಾದರೆ, ಬೆಟಗೇರಿ ಕೃಷ್ಣಶರ್ಮ, ಗೋವಿಂದ ಚುಳಕಿ ಸಂಪಾದನೆಯದಲ್ಲಿ ಸಹಾಯ ಹಸ್ತ ಚಾಚುತ್ತಿದ್ದರು. ಹತ್ತು ಹನ್ನೆರಡು ಕವಿಗಳು ಸೇರಿ ಒಂದೊಂದು ಸಾಲು ಸೇರಿ ವಿನೂತನ ಮಾದರಿಯ `ಖೋ' ಕವನ `ಜಯಕರ್ನಾಟಕ'ದಲ್ಲಿ ಪ್ರಕಟವಾಗಿತ್ತು. ಬೆಂದ್ರೆಯವರೇ ಸಾಹಿತ್ಯಕ ಆಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು ಎಂದ ಮೇಲೆ ಅವುಗಳ ವೈವಿಧ್ಯ ಗಮನಾರ್ಹ.`ಜಯಕರ್ನಾಟಕ'ದಲ್ಲಿಯ ಗೋಕಾಕರ ವಿಮರ್ಶೆಯ ಲೇಖನಗಳು ಹೊಸ ವಿಮರ್ಶೆಯ ಬುನಾದಿಯನ್ನು ಹಾಕಿದವು. `ಆಗ ಮೈಸೂರಿನ `ಪ್ರಬುದ್ಧ ಕರ್ನಾಟಕ'ದಷ್ಟೇ ಮಹತ್ವದ ಪತ್ರಿಕೆ ಇದಾಗಿತ್ತು. `ಜಯ ಕರ್ನಾಟಕ'ದ ಹಳೆಯ ಸಂಚಿಕೆಗಳನ್ನು ಹೊಸ ಸಾಹಿತ್ಯದ ಆಂದೋಲನದ ಅಲೆಗಳೂ ಅಲ್ಲಿ ಕಾಣ ಸಿಗುತ್ತವೆ' ಎಂದು ಕೀರ್ತಿನಾಥ ಕುರ್ತಕೋಟಿ ಅವರು ಉಲ್ಲೇಖಿಸಿದ್ದಾರೆ.
ಸೋಲಾಪುರದಲ್ಲಿ ಉಪನ್ಯಾಸಕರಾಗಿ ಹೋಗುವವರೆಗೆ ಹಲವಾರು ವರ್ಷ ಪತ್ರಿಕೆಗಳಿಗಾಗಿ ದುಡಿದು ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನಿಸಿದ್ದರು. ಅನಿವಾರ್ಯವಾಗಿ ಪತ್ರಿಕೋದ್ಯಮಕ್ಕೆ ಒಲಿದ ಬೇಂದ್ರೆಯವರು ಅಷ್ಟೇ ಅನಿವಾರ್ಯವಾಗಿ ದೂರ ಸರಿಯಬೇಕಾಯಿತು. ಇದರಿಂದ ಕನ್ನಡ ಕಾವ್ಯಕ್ಷೇತ್ರಕ್ಕೆ ಅಪೂರ್ವ ಲಾಭವಾಯಿತು.
ಬೇಂದ್ರೆಯವರ ರೇಖಾಚಿತ್ರಗಳು (ಮೇಲಿನಿಂದ ಕೆಳಕ್ಕೆ): ಬಿ.ವಿ.ರಾಮಮೂರ್ತಿ, ಆರ್.ಎಸ್. ನಾಯ್ಡು, ಕೆ.ಕೆ. ಹೆಬ್ಬಾರ, ಮತ್ತು ಅನಾಮಿಕ ಕಲಾವಿದ, ಹರಿಣಿ
ಕಾಮೆಂಟ್‌ಗಳು