ಪತ್ನಿ ಪೀಡಕ ಶೇಕ್ಸ್‌ಪಿಯರ್ ತೆರಿಗೆವಂಚಕ ಕೂಡ!
ಶೇಕ್ಸ್‌ಪಿಯರ್ ಜಾಗತಿಕ ಸಾಂಸ್ಕೃತಿಕ ನಕ್ಷೆಯಲ್ಲಿ ಸದಾ ಸುದ್ದಿಯಲ್ಲಿರುವ ಹೆಸರು. ಶೇಕ್ಸ್‌ಪಿಯರ್‌ನಷ್ಟೇ ಮಹತ್ವದ ಲೇಖಕರು ಬಹಳ ಜನರಿದ್ದಾರೆ. ಆದರೆ ಅವನಷ್ಟು ಮಹತ್ವ ಪಡೆದಿರುವವರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಈ ಅರ್ಥದಲ್ಲಿ ಶೇಕ್ಸ್‌ಪಿಯರ್ ಅದ್ವೀತಿಯ. ಅವನಿಗೆ ದೊರೆತ ಮಹತ್ವದ ಹಿಂದೆ ಹಲವಾರು ರಾಜಕೀಯ, ಸಾಂಸ್ಕೃತಿಕ ಕಾರಣಗಳಿವೆ. ಶೇಕ್ಸ್‌ಪಿಯರ್ ಸ್ಪೇಶಲಿಸ್ಟ್‌ಗಳ ಸಂಖ್ಯೆಯೇ ಅಗಣಿತವನ್ನುವಷ್ಟರ ಮಟ್ಟಿಗೆ ಬೆಳೆದಿದೆ. ಇಂಗ್ಲೆಂಡಿನಲ್ಲಿ ಶೇಕ್ಸ್‌ಪಿಯರ್ ಒಂದು ಇಂಡಸ್ಟ್ರಿ. ಅವನ ದೇಶದ ಜನ ಸೂರ್ಯ ಮುಳುಗದಂತೆ ಜಗತ್ತನಾಳಿದ್ದು ಒಂದು ಕಾರಣವಾದರೆ. ಆ ದೇಶದ ಜನತೆ ತಮ್ಮ ಸಾಹಸಪ್ರಿಯತೆ ಬೆಳೆವಣಿಗೆಯೊಂದಿಗೆ ಶೇಕ್ಸ್‌ಪಿಯರ್‌ನನ್ನು ಬೆಳೆಸಿದ್ದು, ಆ ಮೂಲಕ ತಾವೂ ಬೆಳೆದದ್ದು ಮತ್ತೊಂದು ಮಹತ್ವದ ಕಾರಣ.
ಶೇಕ್ಸ್‌ಪಿಯರ್ ಕುರಿತು ಏನೇ ಬರೆದರೂ ಅದು ಚರ್ಚೆಯ ವಸ್ತುವಾಗುತ್ತದೆ. ಭಾರತದ ವಿಶ್ವವಿದ್ಯಾಲಯಗಳ ಇಂಗ್ಲಿಷ್ ವಿಭಾಗಗಳಲ್ಲಿ ನಡೆದಿರುವ ಬಹುತೇಕ ಸಂಶೋಧನೆಗಳು ಶೇಕ್ಸ್ಪಿಯರ್ನನ್ನು ವಸ್ತುವಾಗಿರಿಸಿಕೊಂಡಂತವು.
ಶೇಕ್ಸ್‌ಪಿಯರ್ ಈಗ ಮತ್ತೆ ಸುದ್ದಿಯಲ್ಲಿದ್ದಾನೆ ಎಂಬುದು ಕ್ಲೀಷೆಯ ಮಾತು. ಹಾಗೆ ನೋಡಿದರೆ ಕಳೆದ ಎರಡು ಶತಮಾನಗಳಿಂದ ಈಚೆಗೆ ಯಾವಾಗ ಶೇಕ್ಸ್‌ಪಿಯರ್ ಸುದ್ದಿಯಲ್ಲಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟಸಾಧ್ಯ ಮಾತ್ರವಲ್ಲ ಅಸಾಧ್ಯ ಕೂಡ. ಆದರೆ ಸುದ್ದಿಯಲ್ಲಿರುವ ಪ್ರಕ್ರಿಯೆಗೆ ಹೊಸ ಆಯಾಮಗಳು ಸೇರುತ್ತಲೇ ಇರುತ್ತವೆ. ಅದು ಬಹುತೇಕ ಕೊನೆಯಿರದ, ಕೊನೆಯಾಗದ ಪ್ರಕ್ರಿಯೆ. ಶೇಕ್ಸ್ಪಿಯರ್ ಕುರಿತು ಡಂಕೆನ್ ಜೋನ್ಸ್ ಹೊಸ ಜೀವನಚರಿತ್ರೆ `ಅನ್‌ಜಂಟಲ್ ಶೇಕ್ಸ್‌ಪಿಯರ್' ಪ್ರಕಟಸಿ ಸಾಹಿತ್ಯ-ಸಾಂಸ್ಕೃತಿಕ ಲೋಕ ತಮ್ಮತ್ತ ಗಮನ ಹರಿಸುವಂತೆ ಮಾಡಿದ್ದಾರೆ. ಆ ಮೂಲಕ ಸುದ್ದಿಯಲ್ಲಿದ್ದಾರೆ.
ರಾಣಿ ಎಲಿಜಬೆತಳ ಆಳ್ವಿಕೆಯಲ್ಲಿನ ಕಾಲದ ಸಾಮಾಜಿಕ, ಸಾಂಸ್ಕೃತಿಕ ಜನಜೀವನ ಕುರಿತು ಅಧಿಕೃತವಾಗಿ ಎಲ್ಲ ಸಾಧಾರಗಳೊಂದಿಗೆ ಬರೆಯುವ ಸಾಮರ್ಥ್ಯವಿರುವ ಮತ್ತು ಅದನ್ನು ಅಕ್ಷರದಲ್ಲಿ ಹಿಡಿದಿಡುವ ಪ್ರಾಮಾಣಿಕತೆ ಕ್ಯಾಥರೀನ್‌ರಿಗೆ ಇದೆ. ಅವರು ತಮ್ಮ `ಅನ್‌ಜೆಂಟಲ್ ಶೇಕ್ಸ್ಪಿಯರ್' ಕೃತಿಯ ಮುನ್ನುಡಿಯಲ್ಲಿ `ಶೇಕ್ಸ್‌ಪಿಯರ್ ಸೇರಿದಂತೆ ಎಲಿಜಬೆತ್ ಯುಗದ ಯಾರೂ ಈಗ ನಾವು ತಿಳಿದುಕೊಂಡಿರುವ ಪೂರ್ವಗ್ರಹರಹಿತ, ನಿಸ್ವಾರ್ಥ ಮತ್ತು ಉದಾತ್ತತೆಯಿಂದ ಕೂಡಿದ ಸುಸಂಸ್ಕೃತ- ಒಳ್ಳೆಯವರಾಗಿದ್ದರು ಎಂದು ನಾನು ನಂಬುವುದಿಲ್ಲ' ಎಂದು ತಿಳಿಸಿ `ಈ ಯುಗದ ಬಹುತೇಕ ಪ್ರತಿಭಾವಂತರು ಮಹತ್ವಾಕಾಂಕ್ಷಿಗಳು' ಎಂದು ಸ್ಪಷ್ಟೀಕರಣ ನೀಡುತ್ತಾರೆ.
ಜಿಪುಣ, ತೆರಿಗೆ ವಂಚಕ, ಸಾಲಗಾರರನ್ನು ಕೋರ್ಟಿಗೆ ಎಳೆದು ಹಿಂಸಿಸಿದ, ಒರಟಾದ ಪತಿ; ತಂದೆ, ಒಟ್ಟಾರೆ ಅಸಂಸ್ಕೃತ, ಅಸಭ್ಯ, ಅವಿನಯ ವ್ಯಕ್ತಿಯಾಗಿದ್ದ. ತನ್ನ ವೈಯಕ್ತಿಕ ಸೌಕರ್ಯಗಳಿಗಾಗಿ ಬೇರೆಯವರನ್ನು ಸುಲಿಗೆ ಮಾಡುವ ಸ್ವಭಾವದವನಾಗಿದ್ದ ಶೇಕ್ಸ್‌ಪಿಯರ್ ಅಕ್ಷಮ್ಯ ಪ್ರತಿಷ್ಠಾಪೂಜಕನಾಗಿದ್ದ ಎಂದು ಕ್ಯಾಥರೀನ್ ಬರೆಯುತ್ತಾರೆ.
ಶೇಕ್ಸ್‌ಪಿಯರ್‌ನ ಜಿಪುಣತನ ವ್ಯಾಪಾರಿ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೆ ತನ್ನ ಕುಟುಂಬದ ಬಗೆಗೂ ಅವನಿಗೆ ಪ್ರೀತಿಯಿರಲಿಲ್ಲ ಎಂದು ಮೃತ್ಯುಪತ್ರ (ವಿಲ್) ಉಲ್ಲೇಖಿಸಿ ತಿಳಿಸುವ ಕ್ಯಾಥರೀನ್ ಶೇಕ್ಸ್‌ಪಿಯರ್ ತನ್ನ ಪತ್ನಿಗೆ ಸರಿಯಾಗಿ ಹಣ ನೀಡದೇ ಇದ್ದುದರಿಂದ ಆಕೆ ಸ್ಥಳೀಯ ರೈತರಿಂದ ಸಾಲ ಪಡೆದು ಬದುಕ ಬೇಕಾಯ್ತು ಎಂದು ವಿಲ್ ಉಲ್ಲೇಖಿಸುತ್ತಾರೆ.
ಶಬ್ದಗಳ ಜಗತ್ತಿನಲ್ಲ ಉದಾರನಾಗಿದ್ದ ಕವಿ ಬದುಕಿನ ಇನ್ನುಳಿದ ಕ್ಷೇತ್ರಗಳಲ್ಲಿ ತೀರಾ ಲೋಭಿಯಾಗಿದ್ದ. ಶ್ರೀಮಂತನಾಗುವ ದುರಾಸೆಯಿಂದ ನಿರಾಶ್ರಿತ ಮಕ್ಕಳು, ವೃದ್ಧರು ಸೇರಿದಂತೆ ನಿರ್ಗತಿಕರ ಜೀವನಾಧಾರಕ್ಕಾಗಿ ನೀಡುವ ತೆರಿಗೆಯನ್ನೂ ವಂಚಿಸಿದ್ದ. ಬರಗಾಲದ ಸಂದರ್ಭದಲ್ಲಿ ಧಾನ್ಯವನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಸಾಮಾಜಿಕ, ಸಾಂಸ್ಕೃತಿಕ ಜಗತ್ತಿನಿಂದ ಅಪಾರ ಲಾಭ ಪಡೆದಿದ್ದ ಶೇಕ್ಸ್ಪಿಯರ್ ಸ್ಥಳೀಯ ಸಮಾಜಕ್ಕೆ ಅವನು ಮರಳಿಸಿದ್ದು ಕಡಿಮೆ. ಸ್ಟ್ರಾಟ್ ಫೋರ್ಡ್ ನಿರ್ಗತಿಕರಿಗಾಗಿ ಅವನು ಕೇವಲ ಹತ್ತು ಪೌಂಡ್ ತೆಗೆದಿರಿಸಿದ ಬಗ್ಗೆ ಅವನ ವಿಲ್ ತಿಳಿಸುತ್ತದೆ.
ಹಣದ ವಿಷಯದಲ್ಲಿ ನಾಟಕಕಾರ ಅತೀ ನೀಚತನದಿಂದ ವರ್ತಿಸುತ್ತಿದ್ದ ಎಂಬುದಕ್ಕೆ ಹಲವಾರು ಸಾಕ್ಷ್ಯಗಳನ್ನು ಕ್ಯಾಥರೀನ್ ಒದಗಿಸುತ್ತಾರೆ. ಆದರೆ ಮನರಂಜನೆ ನೀಡುವ, ಖುಷಿಪಡಿಸುವ ಶೇಕ್ಸ್‌ಪಿಯರ್‌ನ ಸಾಮರ್ಥ್ಯವನ್ನು ಅವರು ಪ್ರಶ್ನಿಸುವುದಿಲ್ಲ. ದ್ವಂದ್ವಗಳೊಂದಿಗೆ ವ್ಯಕ್ತವಾಗುವ ಶೇಕ್ಸ್‌ಪಿಯರ್‌ನ ವ್ಯಕ್ತಿತ್ವವನ್ನು ಕ್ಯಾಥರೀನ್ ತಮ್ಮ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ.
ಶೇಕ್ಸ್‌ಪಿಯರ್ ಒಲವಿಲ್ಲದ, ಮನಸ್ಸಿಲ್ಲದ ವೈವಾಹಿಕ ಜೀವನ ನಡೆಸಿದ. ಅವನು ಸ್ತ್ರೀಯರ ಕುರಿತು ಒಲವುಳ್ಳನಾಗಿರಲಿಲ್ಲ. ಅಷ್ಟೇ ಅಲ್ಲ ರಾಜಮನೆತನದ ಹರಯದ ಯುವಕರೊಂದಿಗೆ ಸಖ್ಯ ನಾಟಕಕಾರನಿಗಿತ್ತು ಎಂದು ಹೇಳುವ ಲೇಖಕಿ ಅವನ ಅನೈಸರ್ಗಿಕ ಲೈಂಗಿಕ ಬದುಕನ್ನು ತಿಳಿಸುವುದಕ್ಕೆ ಪುರಾವೆಯಾಗಿ `ರೇಪ್ ಆಫ್ ಲೂಕ್ರಿಸ್' ಮತ್ತು ಸಾನೆಟ್‌ಗಳನ್ನು ಬಳಸುತ್ತಾರೆ.
ಚರ್ಚೆಗಳಿಗೆ ನಿಯತವಾಗಿ ಶೇಕ್ಸ್‌ಪಿಯರ್ ಭೇಟಿ ನೀಡುತ್ತಿರಲಿಲ್ಲ. ಬಹುತೇಕ ನಾಸ್ತಿಕನಾಗಿದ್ದ. ಶೇಕ್ಸ್‌ಪಿಯರ್ ಸಮಕಾಲೀನ ರಾಜಕಾರಣದ ಒತ್ತಡಗಳನ್ನು ಐತಿಹಾಸಿಕ, ದುರಂತ ನಾಟಕಗಳಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾನೆ ಎಂದು ವಿವರಿಸುವ ಕ್ಯಾಥರೀನ್ ಗೆಳೆಯರ ಸಾವು, ಪ್ಲೇಗ್‌ನಿಂದ ಮುಚ್ಚಲಾದ ನಾಟ್ಯಗೃಹಗಳು, ಜೊತೆ ಬರೆಹಗಾರರ ಕುರಿತ ಹೊಟ್ಟೆಕಿಚ್ಚು, ಮತ್ಸರ, ಸಾಲದಲ್ಲಿ ಬಳಲಿದ ದಿನಗಳು ತನ್ನ ಸುತ್ತಲಿನ ಪ್ರತಿಯೊಂದು ಆಘಾತಕಾರಿ ಘಟನೆಯನ್ನೂ ಕಲಾಕೃತಿಯಾಗಿಸಲು ಶೇಕ್ಸ್ಪಿಯರ್ ಶ್ರಮಿಸಿದ ಎಂದು ತಿಳಿಸುತ್ತಾರೆ.
ದ್ವಂದ್ವಗಳೊಂದಿಗೆ ವ್ಯಕ್ತವಾಗುವ ಶೇಕ್ಸ್‌ಪಿಯರ್‌ನ ವ್ಯಕ್ತಿತ್ವವನ್ನು ವರ್ಣರಂಜಿತವಾಗಿ ಚಿತ್ರಿಸಿರುವ ಕ್ಯಾಥರೀನ್ ಪುಸ್ತಕದ ಪ್ರತಿಪುಟವನ್ನು ಕುತೂಹಲ, ಆಸಕ್ತಿಗಳಿಂದ ಓದುವಂತೆ ಹೊಸವಿವರಗಳನ್ನು ಒದಗಿಸುತ್ತಾರೆ.
`ಅನ್‌ಜೆಂಟಲ್ ಶೇಕ್ಸ್‌ಪಿಯರ್' ಪುಸ್ತಕ ಬಿಡುಗಡೆಯಾಗುವುದಕ್ಕೆ ಮುಂಚಿತವಾಗಿಯೇ ಕ್ಯಾಥರೀನ್ ಶೇಕ್ಸ್‌ಪಿಯರ್‌ನ ವ್ಯಕ್ತಿತ್ವದ ಚಾರಿತ್ರ್ಯ ವಧೆ ಮಾಡಿದ್ದಾರೆ ಎಂಬ ಅಪಖ್ಯಾತಿ ಎಲ್ಲೆಡೆ ಹರಡಿತ್ತು. ಬಿಡುಗಡೆಯಾದ ನಂತರ ಶೇಕ್ಸ್‌ಪಿಯರ್ ಬರ್ತ್‌ಡೇ ಟ್ರಸ್ಟ್‌ನ ಅಧ್ಯಕ್ಷ ಪ್ರೊ. ಸ್ಟ್ಯಾನ್ಲಿ ವೆಲ್ಸ್ ಪುಸ್ತಕ ಕುರಿತು `ಉದ್ರೇಕಕಾರಿ' ಎಂದು ಟೀಕಿಸುವುದರೊಂದಿಗೆ `ಅವನು ನಿಜವಾಗಿ ಹೇಗಿದ್ದ ಎಂದು ನಮಗೆ ತಿಳಿದಿಲ್ಲ. ನಾವು ಬರಿ ಊಹಿಸಬಹುದು. ಅವನು ತನ್ನ ಕಾಲದ ಮನುಷ್ಯ. ನಾವು ನೈತಿಕ ನಿರ್ಣಯಗಳನ್ನು ನೀಡಲು ಸಾಧ್ಯವಿಲ್ಲ' ಎಂದು ಪುಸ್ತಕ ಕುರಿತ ಸ್ಪಷ್ಟವಾದ, ಖಚಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಶೇಕ್ಸ್‌ಪಿಯರ್‌ನ ರೇಖಾಚಿತ್ರಗಳು: ಆರ್.ಎಸ್. ನಾಯ್ದು
ಕಾಮೆಂಟ್‌ಗಳು