’೧೮೫೭ರ ಸಿಪಾಯಿದಂಗೆ’ ಮತ್ತು ’ಭಾಲ್ಕಿ ಪಿತೂರಿ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಸರಿಯಾಗಿ ೬೧ ವರ್ಷಗಳು ಪೂರ್ಣಗೊಂಡಿವೆ. ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಟ ಆರಂಭವಾಗಿ ೧೫೧ ವರ್ಷಗಳಾಗಿವೆ. ಸತತ ೯೦ ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಭಾಗಿಯಾದ ಬಹುತೇಕರು `ಕಾಲ'ನ ಮನೆ ಸೇರಿದ್ದಾರೆ. ಹೊರಾಟ ಮತ್ತು ಅದರ ನೆನಪುಗಳು ಇತಿಹಾಸದ ಪುಟ ಸೇರಿವೆ. ಹಲವು ಪ್ರಸಂಗ- ಘಟನೆಗಳು ಪುಸ್ತಕದ ಪುಟಗಳಲ್ಲಿ ಮರೆತು ಹೋಗಿವೆ. ಮರೆತು ಹೋದ, ಆದರೆ , ಮರೆಯಬಾರದ ಒಂದು ಘಟನೆಯ ವಿವರ ಇಲ್ಲಿದೆ- **** ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಬೀದರ್ ಜಿಲ್ಲೆಯ ಭಾಲ್ಕಿಗೂ ಏನು ಸಂಬಂಧ? ವಿದೇಶಿ ವಿದ್ವಾಂಸರು `ಸಿಪಾಯಿ ದಂಗೆ' ಗುರುತಿಸುವ `ಮೊದಲ ಸ್ವಾತಂತ್ರ್ಯ ಸಂಗ್ರಾಮ' ಆರಂಭವಾದದ್ದು ಸರಿಯಾಗಿ ೧೫೧ ವರ್ಷಗಳ ಹಿಂದೆ. ಸತತ ಹತ್ತು ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ನಡೆದ ದಂಗೆ- ಪಿತೂರಿಗಳು ಕಂಪೆನಿ ಸರ್ಕಾರವನ್ನು ಕಂಗೆಡಿಸ್ದಿದವು. ಸರಿಯಾಗಿ ಹತ್ತು ವರ್ಷಗಳ ನಂತರ `ಭಾಲ್ಕಿ ಪಿತೂರಿ'ಯನ್ನು ವಿಫಲಗೊಳಿಸುವ ಮೂಲಕ ಬ್ರಿಟಿಷರು ಮೊದಲ ಹೋರಾಟವನ್ನು ಸಂಪೂರ್ಣವಾಗಿ ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ಆ ಕಥೆಯ ಕೆಲವು ಐತಿಹಾಸಿಕ ವಿವರಗಳು ಇಲ್ಲಿವೆ- ೧೮೫೭ಮೇ ೧೦ರಂದು ಮೀರತ್‌ನಲ್ಲಿ ಮತ್ತು ಅಂಬಾಲಾಗಳ ಬ್ರಿಟಿಷ್ ಸೇನಾ ಪಡೆಯಲ್ಲಿ ಆರಂಭವಾದ ದಂಗೆಯು ರಾಷ್ಟ್ರದ ಹಲವೆಡೆಗಳಲ್ಲಿ ಪಸರಿಸಿತು. ಭಾರತೀಯರು ನಡೆಸಿದ ೧೮೫೭ರ ಹೋರಾಟದ ತಕ್ಷಣದ ಕಾರಣ ಬಂದೂಕಿನ ತೋಟಾಗಳಿಗೆ `ಹಂದಿ ಮತ್ತು ಗೋವಿನ ಕ...