ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು
ಬರವಣಿಗೆ ಮಾತ್ರವಲ್ಲದೆ ಓದು ಅದರಲ್ಲೂ ವಿಶೇಷವಾಗಿ ’ಸಾಹಿತ್ಯದ ಓದು’ ಕೂಡ ಅಭಿವ್ಯಕ್ತಿಯ ಮಾಧ್ಯಮ ಎಂದು ಖಚಿತವಾಗಿ ನಂಬಿದವ, ನಂಬುವವ ನಾನು. ಕಳೆದ ಎರಡು ದಶಕಗಳ ಅವಧಿಯಲ್ಲಿ ಓದುಗನಾಗಿ ಸಾಹಿತ್ಯಲೋಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕುತೂಹಲ - ಆಸಕ್ತಿಯಿಂದ ಗಮನಿಸುತ್ತ ಬಂದಿದ್ದೇನೆ. ಹಲವು ಸಲ ಹೊರಗಿನವನಾಗಿ ಕೆಲವೊಮ್ಮೆ ’ಒಳಗಿನವ’ನಾಗಿ ಯೋಚಿಸಿ, ವರ್ತಿಸಿದ್ದೇನೆ. ಹೀಗಾಗಿ ಸಾಹಿತ್ಯದ ಜೊತೆಗೆ ನಿರ್ಧಿಷ್ಟವಾದ ಮತ್ತು ಹದವಾದ ’ಮಾನಸಿಕ ದೂರ’ ಇಟ್ಟುಕೊಳ್ಳುವುದು ಸಾಧ್ಯವಾಗಿದೆ. ಬರಹಗಾರನಾಗಿ ನನಗೆ ಇರುವ ಅನುಭವ ಸೀಮಿತವಾದದ್ದು. ಮೊದಲೇ ಹೇಳಿದ ಹಾಗೆ ನನಗೆ ಓದುವುದೇ ಅಭಿವ್ಯಕ್ತಿ ಎಂದು ನಂಬಿದ್ದರಿಂದ ಓದುವ ಖುಷಿಯನ್ನೇ ಬೆಳೆಸಿಕೊಳ್ಳುತ್ತ ಹೋದೆ. ಬರೆಯುವುದಕ್ಕಿಂತ ಓದುಗನಾಗುವುದೇ ನನ್ನ ಆಸಕ್ತಿ ಮತ್ತು ಗುರಿಯಾಗಿತ್ತು. ಹಾಗೆ ನೋಡಿದರೆ ನನ್ನ ಮತ್ತು ನನ್ನಂತಹ ಹಲವರ ಸಾಹಿತ್ಯದ ಆಸಕ್ತಿ ಬೆಳೆಯಲು ಆರಂಭವಾದದ್ದು ಭಾನುವಾರದ ಸಾಪ್ತಾಹಿಕ ಮತ್ತು ವಾರಪತ್ರಿಕೆಗಳ ಮೂಲಕ, ಕಳೆದ ಒಂದು ದಶಕದ ಅವಧಿಯಲ್ಲಿ ಸಾಹಿತ್ಯ ಪತ್ರಿಕೆಗಳ ಜೊತೆಗಿನ ಒಡನಾಟ ಮತ್ತು ಪ್ರಮುಖ ದೈನಿಕದಲ್ಲಿ ಅದರಲ್ಲೂ ವಿಶೇಷವಾಗಿ ಸಾಪ್ತಾಹಿಕ ವಿಭಾಗದಲ್ಲಿ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಕೆಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. ’ಸಾಹಿತ್ಯ ಸೃಷ್ಟಿ ಮತ್ತು ಮಾಧ್ಯಮಗಳು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಚರ್ಚೆ ನಡೆಸುವುದಕ್ಕಾಗಿ ಇಲ್ಲಿ ನಿಂತಿದ್ದೇನ...