ಕೃಷಿಯ ಪ್ರಗತಿಯಲ್ಲಿ ಮುದ್ರಣ ಮಾಧ್ಯಮದ ಪಾತ್ರ
ಒಂದು ಸಕ್ಸೆಸ್ ಸ್ಟೋರಿಯ ಮುಖಾಂತರ ನನ್ನ ಮಾತುಗಳನ್ನು ಆರಂಭಿಸುತ್ತೇನೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನಲ್ಲಿ ಅಹಮದಾಬಾದ್ ಎಂಬ ಪುಟ್ಟ ಹಳ್ಳಿಯಿದೆ. ೧೯೭೦ರಲ್ಲಿ ಆ ಊರಿನ ಒಬ್ಬ ಡಿಪ್ಲೊಮಾ ಪದವೀಧರ ಯುವಕ ಪುಣೆಯಲ್ಲಿ ಜ್ಯೂನಿಯರ್ ಎಂಜಿನಿಯರ್ ಆಗಿದ್ದ. ಜಡ್ಡುಗಟ್ಟಿದ ಸರ್ಕಾರಿ ವ್ಯವಸ್ಥೆ ಮತ್ತು ವ್ಯಾಪಕ ಭ್ರಷ್ಟಾಚಾರ ಮತ್ತಿತರ ಕಾರಣಗಳಿಗಾಗಿ ಸರ್ಕಾರಿ ನೌಕರಿ ತೊರೆಯಲು ನಿರ್ಧರಿಸಿದ. ತನ್ನ ಮೇಲಧಿಕಾರಿಗೆ ರಾಜೀನಾಮೆ ಪತ್ರ ಸಲ್ಲಿಸಿದ. ಆಗಿನ ಕಾಲದಲ್ಲಿ ಕೈ ತುಂಬ ಅಲ್ಲದಿದಿದ್ದರೂ ನೆಮ್ಮದಿಯಿಂದ ಬದುಕು ಸಾಗಿಸಬಹುದಾದಷ್ಟು ವೇತನ ಬರುತ್ತಿತ್ತು. ಮೇಲಧಿಕಾರಿ ಯುವಕನಿಗೆ ಕೆಲಸ ತೊರೆಯದೇ ಸಲಹೆ ಮಾಡಿದರು. ತಲೆ ತುಂಬ ಆದರ್ಶ ತುಂಬಿಕೊಂಡಿದ್ದ ಯುವಕ ತನ್ನ ನಿರ್ಧಾರದಲ್ಲಿ ಗಟ್ಟಿಯಾಗಿದ್ದ. ಕೆಲಸ ಬಿಟ್ಟು ಏನ್ ಮಾಡ್ತೀರಿ? ಎಂಬ ಪ್ರಶ್ನೆಗೆ ಹೊಲಕ್ಕೆ ಹೋಗಿ ಕೃಷಿ ಮಾಡ್ತೀನಿ ಎಂದು ಉತ್ತರಿಸಿ ಊರಿಗೆ ಬಂದ. ಊರಿನ ಹಿರಿಯರು ಪ್ರಮುಖರು ’ತಮ್ಮಾ ಹೊಲದಾಗ ಎಷ್ಟು ಅಗ್ದರೂ ಮಣ್ಣು ಮತ್ತು ಕಸಾನೇ ಬರ್‍ತಾದ ಹೊರ್‍ತು ನೋಟು ಬರಂಗಿಲ್ಲ. ಸುಮ್ಮನೆ ವಾಪಾಸ್ ಕೆಲಸಕ್ಕೆ ಹೋಗು ಅಂತ ಕಿವಿಮಾತು ಹೇಳಿದರು. ಹಠಮಾರಿ ಯುವಕ ಕೇಳಲಿಲ್ಲ. ಒಂದಷ್ಟು ಸಾಲ ಮಾಡಿ ಕೃಷಿ ಆರಂಭಿಸಿದ. ಅವನ ಟೈಮ್ ಚೆನ್ನಾಗಿರಲಿಲ್ಲ. ದೇಶವನ್ನು ಕಾಡಿದ ೧೯೭೧ರ ಭೀಕರ ಬರಗಾಲ ಆರಂಭವಾಗಿತ್ತು. ಮಳೆ ಕೈಕೊಟ್ಟು ಮುಂಗಾರು-ಹಿಂಗಾರುಗಳೆರಡೂ ಬೆಳೆಯಲಿಲ್ಲ. ಎರಡನೇ ವರ್ಷ ಮತ್ತಷ್ಟು ಸಾಲ ಮಾಡಿ ಭಾವಿ ತೋಡಿಸಿದ. ಅದು ಕೂಡ ಕೆಲವೇ ದಿನಗಳಲ್ಲಿ ಬತ್ತಿ ಹೋಯಿತು. ಇದು ಕೇವಲ ಒಂದು ವರುಷ ಅಲ್ಲ ಮೂರು ವರ್ಷ ಇದೇ ಕಥೆ ಮುಂದುವರೆಯಿತು.
ಆಡಿಕೊಳ್ಳುವವರ ಮುಂದೆ ಜಾರಿ ಬೀಳಬಾರದು ಅಂತ ಆ ಯುವಕ ಏನೂ ಆಗಿಲ್ಲ ಎನ್ನುವವರಂತೆ ಕೃಷಿಯನ್ನು ನಂಬಿ ಕೆಲಸ ಮುಂದುವರೆಸಿದ. ಹೊಲ ಹದಮಾಡಿಟ್ಟ. ಮಳೆ ಸುರಿಯಿತು. ನೆಲ ಹಸಿರಾಯಿತು. ಕನಸು ಚಿಗುರೊಡೆದವು. ಸಾಂಪ್ರದಾಯಿಕ ಬೆಳೆಗಳಾದ ಉದ್ದು-ಹೆಸರು, ಕಡಲೆ, ಜೋಳ ಬೆಳೆದ. ನಾಲ್ಕನೇ ವರ್ಷ ಮೊದಲ ಬಾರಿಗೆ ಸುರಿದ ಹಣಕ್ಕೆ ಕನಿಷ್ಠ ಪ್ರಮಾಣದ ಫಲಿತಾಂಶ ಪಡೆದಿದ್ದ. ಹುಮ್ಮಸ್ಸು ಇಮ್ಮಡಿಸಿ ನೀರು, ನೆಲದ ನಿರ್ವಹಣೆಯತ್ತ ಗಮನ ಹರಿಸಿದ. ಅದಕ್ಕೆ ಅಗತ್ಯವಿರುವ ಅಧ್ಯಯನ ನಡೆಸಿದ. ಇಷ್ಟೇ ಹಣ ಬಂದರೆ ಕೃಷಿ ಮಾಡುವುದರಲ್ಲಿ ಅರ್ಥವಿಲ್ಲ ಇದನ್ನು ಬೆಳೆಸಬೇಕು ಅಂತ ಯೋಚಿಸಿ ಬೋರ್‌ವೆಲ್ ಕೊರೆಸಿ ಕಬ್ಬು ಬೆಳೆಯಲು ತೊಡಗಿದ. ಅದಕ್ಕೆ ತಗುಲುವ ವೆಚ್ಚ, ಫ್ಯಾಕ್ಟರಿ ಮುಂದೆ ಕೈ ಒಡ್ಡಿ ನಿಲ್ಲಬೇಕಾದ ಅಸಹಾಯಕತೆಯಿಂದ ರೋಸಿ ಕಬ್ಬು ಬೆಳೆಯದೇ ಇರುವ ನಿರ್ಣಯಕ್ಕೆ ಬಂದ. ಹಣ ತರುವ ಕಲ್ಲಂಗಡಿ ಕೃಷಿ ಆರಂಭಿಸಿದ. ನಾಲ್ಕೇ ತಿಂಗಳಲ್ಲಿ ವರ್ಷದ ಆದಾಯ ಗಳಿಸಬಹುದು ಎಂದು ಅಂದಾಜು ಮಾಡಿ ಯಶಸ್ವಿಯಾದ ಕೈತುಂಬ ಹಣ ಬರಲು ಆರಂಭಿಸಿತು. ತಲೆ ಕೆಲಸ ಮಾಡತೊಡಗಿತು. ಅಲ್ಲಾ- ಹಸಿ ಶುಂಠಿ ಬೆಳೆಯಲು ನಿರ್ಧರಿಸಿದ. ಹೀಗೆ ತನ್ನ ಹೊಲದಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುವ ಮೂಲಕ ಆರ್ಥಿಕವಾಗಿ ಸಬಲನಾದ. ಎಕರೆಗೆ ೨೪೦ ಕ್ವಿಂಟಲ್ ವರೆಗೂ ಶುಂಠಿ ಇಳುವರಿ ತೆಗೆದ ಉದಾಹರಣೆ ಇದೆ. ಒಂದು ವರ್ಷದಲ್ಲಿ ಅತಿ ಹೆಚ್ಚು ಅಂದರೆ ೧೯ ಲಕ್ಷರೂಪಾಯಿ ಆದಾಯ ಗಳಿಸಿದ್ದ. ನಷ್ಟವಾದ ವರ್ಷಗಳೂ ಇದ್ದವು.
ಇಂತಹ ಯಶಸ್ಸು ಸಿಕ್ಕ ನಂತರ ಆಡಿಕೊಂಡಿದ್ದ ಹಿರಿಯರು ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆದರು. ನೆಲದಾಗ ನೋಟು ಅಲ್ಲ, ಬಂಗಾರ ತೆಗೀಬಹುದು ಅಂತ ಹೇಳಿದರು. ಸರ್ಕಾರಿ ನೌಕರಿ ಬಿಟ್ಟು ಕೃಷಿ ಆರಂಭಿಸಿ ಯಶಸ್ಸು ಪಡೆದ ಯುವಕನ ಹೆಸರು ಶಿವಾಜಿರಾವ ಪಾಟೀಲ್ ಅಂತ. ಅವರ ಮೂವರು ಮಕ್ಕಳ ಪೈಕಿ ಒಬ್ಬ ಎಂಬಿಬಿಎಸ್ ಮತ್ತೊಬ್ಬ ಬಿಡಿಎಸ್ ಮುಗಿಸಿ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಇನ್ನೊಬ್ಬ ಮಗ ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾನೆ. ಜೊತೆ ಹೊಲಕ್ಕ ಬಂದ ದುಡೀರಿ ನಿಮಗ ಪ್ರ್ಯಾಕ್ಟಿಸ್ ಸಿಗದೇ ಇರುವುದಕ್ಕಿಂತ ಹೆಚ್ಚಿನ ಹಣ ಕೊಡಿಸ್ತಿನಿ ಅಂತ ಶಿವಾಜಿರಾವ ಪಾಟೀಲ್ ತಮ್ಮ ಇಬ್ಬರೂ ಮಕ್ಕಳಿಗೆ ಹೇಳಿದ್ದಾರೆ. ನಿಜವಾಗಿಯೂ ಅವರ ಕೃಷಿಕ ಮಗನ ವರ್ಷದ ಆದಾಯ ತನ್ನ ಇಬ್ಬರೂ ಸಹೋದರರಿಗಿಂತ ಹೆಚ್ಚಿಗಿದೆ. ಇಷ್ಟೇ ಆಗಿದ್ದರೆ ಇದನ್ನೊಂದು ಒಬ್ಬ ವ್ಯಕ್ತಿಯ ಯಶೋಗಾಥೆ ಅಂತ ತಳ್ಳಿಹಾಕಬಹುದಾಗಿತ್ತು. ಹಾಗೆ ನೋಡಿದರೆ ನಮ್ಮ ಸುತ್ತಮುತ್ತ ಸ್ವಲ್ಪ ಕಣ್ಣು ಹಾಯಿಸಿದರೂ ಇಂತಹ ಹತ್ತಾರು ಜನ ಶಿವಾಜಿರಾವ ಸಿಗುತ್ತಾರೆ.
ಈ ಕಥೆಗೆ ಇಲ್ಲಿಗೇ ನಿಲ್ಲುವುದಿಲ್ಲ. ಶಿವಾಜಿರಾವ ನಂತರ ತಲೆಮಾರಿನ ನಂತರದ ಯುವಕರು, ಪದವೀಧರರು ಕೆಲಸ ಹುಡುಕಿ ಅಲೆದಾಡಲು ಹೋಗಿಲ್ಲ. ಆದ್ದರಿಂದ
ಅಹಮದಾಬಾದ್‌ನಲ್ಲಿ ಊರಲ್ಲಿ ಕೃಷಿಕರಾಗಿರುವವರೆಲ್ಲ ಅವರೆಲ್ಲ ಶಾಲೆಗೆ ಹೋಗಿ ಅಕ್ಷರಸ್ಥರಾಗಿರುವವರು ಮತ್ತು ಪದವೀಧರ ಆಗಿರುವಂತವರು. ರೈತರು ೨೫-೩೫ ವರ್ಷ ವಯಸ್ಸಿನವರಾಗಿದ್ದಾರೆ. ಕೃಷಿ ಲಾಭದಾಯಕ ಅಲ್ಲ ಎಂಬ ಗ್ರಹಿಕೆ ವ್ಯಾಪಕವಾಗಿರುವ ದಿನಗಳಲ್ಲಿ ಆ ಊರಲ್ಲಿ ಕಲಿತ ಹುಡುಗರು ಕೆಲಸ ಹುಡುಕಿ ಬೇರೆ ಕಡೆಗೆ ಹೋಗದೇ ಕೃಷಿಯತ್ತ ಮುಖ ಮಾಡಿರುವುದು ಸೋಜಿಗವನ್ನು ಉಂಟು ಮಾಡುತ್ತದೆ. ಈ ಹುಡುಗರೆಲ್ಲ ಕೃಷಿ ಆರಂಭಿಸಿದ್ದು ೧೦-೧೨ ವರ್ಷಗಳ ಹಿಂದೆ. ಇದರಲ್ಲಿ ಮುದ್ರಣ ಮಾಧ್ಯಮದ ಪಾತ್ರ ಇದೆ. ಕೃಷಿಯನ್ನು ಲಾಭದಾಯಕ ಆಗಿಸಿಕೊಂಡಿದ್ದ ಶಿವಾಜಿರಾವ ಪಾಟೀಲ್ ಬಗ್ಗೆ ಆಗ ಪ್ರತಿಷ್ಠಿತ ಪತ್ರಿಕೆಯ ಪುರವಣಿಯಲ್ಲಿ ಲೇಖನ ಪ್ರಕಟವಾಗಿತ್ತು. ಅಹಮದಾಬಾದ್‌ನಲ್ಲಿ ಕೃಷಿ ಆರಂಭಿಸಿದ ಯುವಕರೆಲ್ಲ ಪತ್ರಿಕೆ ಓದಿ ಪ್ರೇರಿತರಾದವರು ಅಂತ ನನ್ನ ಕ್ಲೈಮ್ ಅಲ್ಲ. ಶಿವಾಜಿರಾವ್ ಯಶಸ್ಸನ್ನು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ’ಅಭಿವೃದ್ಧಿ ಪತ್ರಿಕೋದ್ಯಮ’ ಎಂದು ಈಗ ಕರೆಯುವ ಮಾದರಿಯ ಬರವಣಿಗೆಯು ಆರಂಭವಾದ ದಿನಗಳವು.
ಅಂದಹಾಗೆ ಕರ್ನಾಟಕದಲ್ಲಿ ರೈತರು, ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳತ್ತ ಗಮನ ಹರಿಯಲು ಆರಂಭವಾದದ್ದು ಎಂಬತ್ತರ ದಶಕದಲ್ಲಿ. ಪ್ರೊಫೆಸರ್ ನಂಜುಂಡಸ್ವಾಮಿ ಮತ್ತು ಅವರ ಗೆಳೆಯರು ರೈತ ಸಂಘದ ಮೂಲಕ ರೈತರ ಪರವಾದ ಮಾತುಗಳನ್ನು ಆಡಲು ಆರಂಭಿಸಿದ ನಂತರ. ಚಳವಳಿಗೆ ಸಂಬಂಧಿಸಿದ ಸುದ್ದಿಗಳಾದ್ದರಿಂದ ಬಹುತೇಕ ದೈನಿಕ ವರದಿಗಳಲ್ಲಿ ರೈತರು ಕಾಣಿಸಿಕೊಳ್ಳಲು ತೊಡಗಿದರು. ಲಂಕೇಶ್ ಪತ್ರಿಕೆಯಂತಹ ಟ್ಯಾಬ್ಲಾಯ್ಡ್‌ಗಳು ಕೂಡ ಆರಂಭವಾದ ದಿನಗಳವು. ರೈತರು ಮತ್ತು ಅವರ ಹಕ್ಕುಗಳಿಗಾಗಿ, ಅನ್ಯಾಯದ ವಿರುದ್ಧ ಹಲವು ಹೋರಾಟ ಅದಕ್ಕಿಂತ ಮುಂಚೆಯೂ ನಡೆದಿದ್ದವು. ಅವು ಮಾಧ್ಯಮದಲ್ಲಿ ಢಾಳಾಗಿ ಎದ್ದುಕಾಣುವಂತೆ ದಾಖಲಾದದ್ದು ಮಾತ್ರ ರೈತ ಚಳವಳಿಯ ದಿನಗಳಲ್ಲಿಯೇ. ಅದರಿಂದ ಕೃಷಿ ಕ್ಷೇತ್ರಕ್ಕೆ ತಕ್ಷಣದ ಲಾಭ ಆಗದಿದ್ದರೂ ಮಾಧ್ಯಮಗಳು ಅದರಲ್ಲೂ ವಿಶೇಷವಾಗಿ ಮೇನ್‌ಸ್ಟ್ರೀಮ್ ಪತ್ರಿಕೋದ್ಯಮ ರೈತವರ್ಗದ ಕಡೆಗೆ ಗಮನ ಹರಿಸತೊಡಗಿತು.
ಅದು ಮತ್ತಷ್ಟು ಹೆಚ್ಚು ವ್ಯಾಪಕವಾದದ್ದು ಮಾತ್ರ ಕಳೆದ ಒಂದೂವರೆ ದಶಕದ ಅವಧಿಯಲ್ಲಿ. ವಿಷಾದದ ಸಂಗತಿ ಎಂದರೆ ಹಾಗೆ ಮಾಧ್ಯಮಗಳ ಗಮನ ಕೃಷಿಯತ್ತ ಹರಡುವುದಕ್ಕೆ ಕಾರಣವಾದದ್ದು ರೈತರ ಆತ್ಮಹತ್ಯೆ ಪ್ರಕರಣಗಳು ವ್ಯಾಪಕವಾದ ನಂತರ. ೧೯೯೬ರಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಸಿದ್ದೇಶ್ವರದಲ್ಲಿ ಕರ್ನಾಟಕದ ಮೊದಲ ರೈತನ ಆತ್ಮಹತ್ಯೆ ಪ್ರಕರಣ ದಾಖಲಾಯಿತು. ಅಲ್ಲಿಂದ ಆರಂಭವಾದ ಸರಣಿ ಆತ್ಮಹತ್ಯೆಗಳು ಮತ್ತು ಆ ಕುರಿತ ವರದಿಗಳು ರಾಜ್ಯದಾದ್ಯಂತ ಸಂಚಲನ ಮೂಡಿಸಿದವು. ಆ ಪ್ರಕರಣಗಳು ದೇಶದ ಮಾತ್ರವಲ್ಲದೇ ಅಂತರರಾಷ್ಟ್ರೀಯ ಗಮನ ಸೆಳೆದವು.
’ಪತ್ರಕರ್ತರು ಅಂದರೆ ನೇತ್ಯಾತ್ಮಕ ಧೋರಣೆ ಉಳ್ಳವರು. ಪತ್ರಿಕೋದ್ಯಮ ಪಾಸಿಟಿವ್ ಆಗಿ ಯೋಚಿಸುವುದಿಲ್ಲ’ ಎಂಬ ಆರೋಪ ಇದೆ. ಈಗಲೂ ನೇತ್ಯಾತ್ಮಕ ಧೋರಣೆ ಇದ್ದೇ ಇದೆ. ಆದರೆ, ಕುತೂಹಲಕಾರಿ ಸಂಗತಿ ಕೃಷಿ ಪತ್ರಿಕೋದ್ಯiಕ್ಕೆ ಸಂಬಂಧಿಸಿದಂತೆ ಈ ಧೋರಣೆ ಇಲ್ಲ ಎಂಬ ಅಂಶ ಗಮನಾರ್ಹ.
ಕೃಷಿ ಮತ್ತು ಪತ್ರಿಕೋದ್ಯಮದ ಬಗ್ಗೆ ಕೆಲವು ವಿಷಗಳನ್ನು ಇಲ್ಲಿ ಪ್ರಸ್ತಾಪಿಸಬಹುದು. ಕೃಷಿ ಸಂಬಂಧಿತ ಬರಹಗಳನ್ನು ಪ್ರಕಟಿಸುವ ಪತ್ರಿಕೆಗಳಲ್ಲಿ ಎರಡು ರೀತಿಯವುಗಳಿವೆ. ದೈನಿಕಗಳು ಮತ್ತು ನಿಯತಕಾಲಿಕಗಳು ಎಂದು ವರ್ಗೀಕರಿಸಬಹುದು. ಇತ್ತೀಚಿನ ದಿನಗಳಲ್ಲಿ ವಿಷಯಕ್ಕೆ ಸೀಮಿತವಾದ ಪತ್ರಿಕೆಗಳನ್ನು ಪ್ರಕಟಿಸುವ ಪರಿಪಾಠ ಆರಂಭವಾಗಿದೆ. ನಿರ್ದಿಷ್ಟ ಟಾರ್ಗೆಟ್ ರೀಡರ್‍ಸ್‌ನ್ನು ಗಮನದಲ್ಲಿ ಇಟ್ಟುಕೊಂಡು ಇನ್‌ಡೆಪ್ತ್ ಮಾಹಿತಿ ನೀಡಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಪತ್ರಿಕೆಗಳು ಆರಂಭವಾದವು. ಮೊದಲಿಗೆ ಸಾಹಿತ್ಯ, ಸಿನಿಮಾ, ಕ್ರೀಡೆಗಳಿಗೆ ಸೀಮಿತವಾಗಿದ್ದವು. ಈಗ ಸಿನಿಮಾ ಮತ್ತು ಕ್ರೀಡಾ ಪತ್ರಿಕೆಗಳ ಮಾದರಿಯಲ್ಲಿಯೇ ಕೃಷಿಗೆ ಸಂಬಂಧಿಸಿದ ನಿಯತಕಾಲಿಕಗಳು ಪ್ರಕಟವಾಗುತ್ತಿವೆ. ಅವುಗಳ ಸಂಖ್ಯೆ ಮತ್ತು ಪ್ರಸಾರ ಗಣನೀಯವಾಗಿ ಇಲ್ಲದಿದ್ದರೂ ಅವುಗಳ ಕೊಡುಗೆಯನ್ನು ತಳ್ಳಿಹಾಕುವಂತಿಲ್ಲ. ಚಂದಾದಾರರನ್ನು ಗಮನದಲ್ಲಿ ಇಟ್ಟುಕೊಂಡು ಅವರ ಅಗತ್ಯಕ್ಕೆ ತಕ್ಕಂತೆ ಇಂತಹ ಸಂಚಿಕೆಗಳನ್ನು ರೂಪಿಸಲಾಗುತ್ತದೆ. ಕೃಷಿಕರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗುವ ಈ ಸಂಚಿಕೆಗಳಲ್ಲಿ ಸ್ಥೂಲವಾದ ವಿವರಗಳಿಗೆ ಸೀಮಿತ ಆಗಿರುವುದಿಲ್ಲ. ಪ್ರತಿಯೊಂದು ಸಣ್ಣಪುಟ್ಟ ಸಂಗತಿಯನ್ನು ವಿವರವಾಗಿ ನೀಡುವ ಅವಕಾಶ ಇರುತ್ತದೆ. ಮುಖ್ಯವಾಹಿನಿಯ ಪತ್ರಿಕೆಗಳು ನೀಡಲು ಸಾಧ್ಯವಾಗದ್ದನ್ನು ಈ ಪತ್ರಿಕೆಗಳು ನೀಡುತ್ತಿವೆ. ಚಂದಾದಾರನ್ನು ಹೊಂದಿಸುವ ಸಂಕಟ, ಆರ್ಥಿಕ ಮುಗ್ಗಟ್ಟು ಮತ್ತಿತರ ಕಾರಣಗಳಿಂದಾಗಿ ನಿಯತವಾಗಿ ಪ್ರಕಟಿಸುವುದೇ ಆಯಾ ಪತ್ರಿಕೆಗಳ ಸಂಪಾದಕರಿಗೆ ಹೊರೆಯಾಗಿದೆ. ಬಹುಸಂಖ್ಯಾತ ರೈತರು ಪರಂಪರಾನುಗತ ರೂಢಿಯಿಂದ ಕೃಷಿ ಪದ್ಧತಿಯನ್ನೇ ಮುಂದುವರೆಸುವ ಪರಿಪಾಠ ಉಳ್ಳವರು. ಎಂದಿನಂತೆ ಪ್ರಯೋಗಶೀಲ ಹೊಸದರೆಡೆಗೆ ತುಡಿಯುವವರ ಸಂಖ್ಯೆ ಕಡಿಮೆ. ಅವರು ನಗಣ್ಯರೇನಲ್ಲ. ಅಲ್ಪಸಂಖ್ಯಾತರಿಗಾಗಿ ಸಿದ್ಧವಾಗುವ ಪತ್ರಿಕೆಗಳು ಎದುರಿಸುವ ಸಂಕಟಗಳನ್ನೆಲ್ಲ ಈ ಕೃಷಿ ಸಂಬಂಧಿತ ಪತ್ರಿಕೆಗಳು ಎದುರಿಸುತ್ತಿವೆ. ಖರೀದಿಸಬೇಕಾದ ರೈತರಿಗೆ ಆಸಕ್ತಿ- ಹಣ ಇಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅವುಗಳತ್ತ ಗಮನ ಹರಿಸುವುದಿಲ್ಲ. ಸಾಮಾನ್ಯ ಓದುಗರಿಗೂ ಅದು ನಿರಾಸಕ್ತಿಯ ಕ್ಷೇತ್ರ. ಆದರೂ ಇಂತಹ ಕೃಷಿ ಸಂಬಂಧಿತ ನಿಯತಕಾಲಿಕೆಗಳ ಸಂಖ್ಯೆ ೫೦ನ್ನು ದಾಟುತ್ತದೆ. ಇವುಗಳ ಕೊಡುಗೆ ಗಮನಾರ್ಹವಾಗಿದೆ. ಸಂಘ- ಸಂಸ್ಥೆಗಳು ಪ್ರಕಟಿಸುವ ಕೃಷಿ ಸಂಬಂಧಿಸಿದ ಪತ್ರಿಕೆಗಳಿಗೆ ಆರ್ಥಿಕ ಸಂಕಷ್ಟ ಇಲ್ಲದೇ ಇರುವುದರಿಂದ ನಿಯತವಾಗಿಯೇ ಪ್ರಕಟವಾಗುತ್ತವೆ.
ಮುಖ್ಯವಾಹಿನಿಯಲ್ಲಿ ಬರುವ ಪತ್ರಿಕೆಗಳ ಪೈಕಿ ದೈನಿಕಗಳೇ ಪ್ರಮುಖ. ಇವುಗಳಲ್ಲಿಯೂ ಎರಡು ರೀತಿಯ ವಿಭಾಗಗಳು. ಮುಖ್ಯಪತ್ರಿಕೆ ಮತ್ತು ಅವುಗಳ ಜೊತೆಗೆ ನೀಡುವ ಪುರವಣಿಗಳು. ಹಿಂದೆ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡುವುದು ಎಂದರೆ ನೀರಾವರಿಯತ್ತ ಗಮನ ಹರಿಸುವುದು ಎನ್ನುವುದಷ್ಟಕ್ಕೇ ಸೀಮಿತವಾಗಿತ್ತು. ಬೃಹತ್ ಜಲಾಶಯಗಳು ಆ ಯೋಜನೆಗಳಿಗೆ ಹಣ ವಿನಿಯೋಗಿಸುವ ಮೂಲಕ ಹಸಿರಾಗಿಸುವ ಕನಸು, ಭರವಸೆ ತುಂಬಿಸುವ ರೀತಿಯ ಮಾತುಗಳು ಕೇಳಿ ಬರುತ್ತಿದ್ದವು. ಪತ್ರಿಕೆಗಳಲ್ಲಿಯೂ ಕೃಷಿಗೆ ಸಂಬಂಧಿಸಿದ್ದು ಎಂದರೆ ನೀರಾವರಿ ಮಾತ್ರ ಎಂಬಂತಹ ಕಾಲ ಇತ್ತು. ಈಗ ಬಹಳಷ್ಟು ಬದಲಾಗಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು, ಸಮಸ್ಯೆಗಳು, ನೀರು ಮತ್ತು ಅದರ ನಿರ್ವಹಣೆ ಮುಂತಾದ ಸಂಗತಿಗಳು ಕೂಡ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಸುದ್ದಿಗಳಾಗಿ, ಚರ್ಚೆಯ ಲೇಖನಗಳಾಗಿ, ಸಂಪಾದಕೀಯಗಳಾಗಿ ಪ್ರಕಟವಾಗುತ್ತಿವೆ. ಪತ್ರಿಕೆಗಳು ಸಂಕಷ್ಟಕ್ಕೆ ಒಳಗಾಗಿರುವ ’ಕೃಷಿ’ಯ ಪರವಾಗಿ ನಿಂತು ಮಾತನಾಡುತ್ತಿವೆ. ದನಿಯಿಲ್ಲದ ರೈತರ ಧ್ವನಿಯಾಗಿವೆ.
ಸದ್ಯ ಕರ್ನಾಟಕದಾದ್ಯಂತ ನಡೆಯುತ್ತಿರುವ ಚರ್ಚೆ ರೈತರಿಗೆ ಸಂಬಂಧಿಸಿದ್ದು. ಅಭಿವೃದ್ಧಿಯ ಹೆಸರಿನಲ್ಲಿ ಕೃಷಿಯೋಗ್ಯ ಜಮೀನನ್ನು ವಶಪಡಿಸಿಕೊಳ್ಳುವ ಕುರಿತ ಚರ್ಚೆಗೆ ಪ್ರಮುಖ ಪತ್ರಿಕೆಗಳು ನೀಡಿದ ಆದ್ಯತೆಯನ್ನು ಗಮನಿಸಬಹುದು. ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು, ಚರ್ಚೆ, ವಾಗ್ವಾದಗಳು ಮುಂಚೂಣಿಗೆ ಬಂದು ನಿಲ್ಲುವಷ್ಟರ ಮಟ್ಟಿಗೆ ಪತ್ರಿಕೆಗಳಿಗೆ ಪ್ರಮುಖ ಸುದ್ದಿಗಳಾಗುತ್ತಿವೆ. ಕಳೆದ ಒಂದು ತಿಂಗಳ ಅವಧಿಯ ದೈನಿಕಗಳನ್ನು ಅವಲೋಕಿಸಿದರೆ ಬಹುತೇಕ ಸ್ಥಳಾವಕಾಶ ಪಡೆದದ್ದೆಂದರೆ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು ಪ್ರತ್ಯೇಕ ಕೃಷಿ ಬಜೆಟ್ ಬೇಕು ಎಂಬ ಬೇಡಿಕೆಗಳು, ಕೃಷಿ ಮಾರುಕಟ್ಟೆ, ರಸಗೊಬ್ಬರ, ಕುಲಾಂತರಿ ತಳಿಗಳು, ಕೃಷಿ ಸಾಲ ಹೀಗೆ ಪಟ್ಟಿ ಬೆಳೆಯುತ್ತದೆ. ಅಚ್ಚರಿಯ ಮತ್ತು ವಿಷಾದದ ಸಂಗತಿ ಎಂದರೆ ರೈತ ಮತ್ತು ಕೃಷಿಗಳೆರಡರ ಬಗ್ಗೆ ಚರ್ಚೆ ಚಾಲ್ತಿಯಲ್ಲಿ ಇಡುವ ಮೂಲಕ ಅದನ್ನು ಮತವಾಗಿ ಪರಿವರ್ತಿಸಿಕೊಳ್ಳಬಹುದು ಎಂಬ ಜನಪ್ರತಿನಿಧಿಗಳ ಕುತಂತ್ರದ ಭಾಗವಾಗಿಯೂ ಪತ್ರಿಕೆಗಳು ಬಳಕೆ ಆಗುತ್ತಿವೆ.
ಬಹುತೇಕ ಎಲ್ಲ ದೈನಿಕಗಳೂ ಕೃಷಿಗೆ ಸಂಬಂಧಿಸಿದ ಪುರವಣಿಗಳನ್ನು ಪ್ರಕಟಿಸುತ್ತಿವೆ. ಅಭಿವೃದ್ಧಿ ಪತ್ರಿಕೋದ್ಯಮದ ಪರಿಕಲ್ಪನೆಯೊಂದಿಗೆ ಆರಂಭವಾದ ಈ ಪುರವಣಿಗಳು ನಂತರದ ದಿನಗಳಲ್ಲಿ ವ್ಯಾಪಿಸಿಕೊಂಡ ಮತ್ತು ಬೆಳೆದು ನಿಂತ ರೀತಿ ಅಗಾಧವಾದದ್ದು. ಯಶೋಗಾಥೆಗಳ ಜೊತೆಗೆ ಸಲಹೆ- ಸೂಚನೆಗಳು, ಈಗೀಗ ತಜ್ಞರ ಅಂಕಣಗಳು ಸೇರಿಕೊಂಡಿವೆ. ನೀರು ಮತ್ತು ನೀರಿನ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಕಟವಾಗುತ್ತಿರುವ ಸರಣಿಗಳು, ರಾಸಾಯನಿಕ ಕೃಷಿ ಪದ್ಧತಿಗೆ ಸಾವಯವ, ನೈಸರ್ಗಿಕಗಳು ಪರ್ಯಾಯವಾಗಬಲ್ಲದು ಎಂದು ನಡೆಯುತ್ತಿರುವ ಅಭಿಯಾನಕ್ಕೆ ಪತ್ರಿಕೆಗಳು ವೇದಿಕೆ ಕಲ್ಪಿಸಿವೆ. ಒಂದು ದಶಕದ ಹಿಂದಿನ ಪತ್ರಿಕೆಗಳನ್ನು ಈಗಿನ ಪತ್ರಿಕೆಗಳ ಪಕ್ಕಕ್ಕೆ ಇಟ್ಟುನೋಡಿದರೆ ಕೃಷಿ ಆವರಿಸಿರುವ ರೀತಿ ಗಮನಕ್ಕೆ ಬರುತ್ತದೆ. ಹಲವು ಆಯಾಮ ಮತ್ತು ಮಗ್ಗಲುಗಳನ್ನು ದಾಖಲಿಸುವ, ವಿವರಿಸುವ, ಚರ್ಚೆಗೆ ಒಳಪಡಿಸುವ ಮೂಲಕ ಸರಿ-ತಪ್ಪುಗಳ ಬಗ್ಗೆ ಜಿಜ್ಞಾಸೆಗೆ ಹಚ್ಚುವ ಕ್ರಿಯಾಶೀಲ, ಸೃಜನಶೀಲ ಕೆಲಸವನ್ನು ಪತ್ರಿಕೆಗಳು ಮಾಡುತ್ತವೆ.
ಬದುಕು ಚಲನಶೀಲವಾದದ್ದು. ಹಾಗೆಯೇ ಪತ್ರಿಕೋದ್ಯಮ ಕೂಡ. ಕ್ರಿಯಾಶೀಲ ಪತ್ರಕರ್ತರು ಅದನ್ನು ಜೀವಂತವಾಗಿಡುತ್ತಾರೆ.
ಕಾಮೆಂಟ್‌ಗಳು
Borgata Hotel 삼척 출장샵 Casino 상주 출장샵 & Spa, 경주 출장마사지 Atlantic City. Map. 495. Borgata 광양 출장샵 Way Borgata Hotel Casino & Spa, Atlantic City, NJ 논산 출장샵 08401, United States.