ಬಸವೇಶ್ವರ ಮತ್ತು ಅವನ ಕಾಲ
ಡಾ. ಪಿ.ಬಿ.ದೇಸಾಯಿ
ಕನ್ನಡಕ್ಕೆ: ಪ್ರೊ. ಸದಾನಂದ ಕನವಳ್ಳಿ
ಪರಿಷ್ಕರಣೆ: ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
ಪ್ರಕಾಶಕರು: ಶ್ರೀ ಜಗದ್ಗುರು ತೋಂಟದಾರ್ಯ
ಸಂಸ್ಥಾನ ಮಠ ಗದಗ.
‘ನೋಯುವ
ಹಲ್ಲಿನ ಕಡೆಗೇ ನಾಲಿಗೆ ಹೊರಳುತ್ತದೆ’
ಎಂದು ಹೆಸರಾಂತ ನಾಟಕಕಾರ ಗಿರೀಶ್ ಕಾರ್ನಾಡರು ತಮ್ಮ ‘ತಲೆದಂಡ’ಕಕ್ಕಾಗಿ ಬರೆದ ಮಾತುಗಳಲ್ಲಿ ದಾಖಲಿಸಿದ್ದಾರೆ. 12ನೇ ಶತಮಾನವು
ಕರ್ನಾಟಕದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ,
ಸಾಹಿತ್ಯಿಕ ಭಿತ್ತಿಯ ಮೇಲೆ ಬೀರಿದ ಪ್ರಭಾವ ಮತ್ತು ಅದು ಉಂಟು ಮಾಡಿದ ಪರಿಣಾಮಗಳೆರಡೂ
ಅನನ್ಯ. ‘ಬಸವಯುಗ’ ಎಂದು ಕರೆಯಬಹುದಾದ ಕಾಲಘಟ್ಟ
ಅದು. ಈ ಬಗ್ಗೆ ಸಾವಿರಾರು ಪುಟಗಳಷ್ಟು ಬರವಣಿಗೆ- ಸಾಹಿತ್ಯ ಪ್ರಕಟವಾಗಿದೆ. ಪ್ರಕಟವಾಗುತ್ತಲೇ ಇದೆ. ಹನ್ನೆರಡನೇ ಶತಮಾನದ ಚಳವಳಿಯು ನಾಟಕ- ಕಾದಂಬರಿ ಸೇರಿದಂತೆ ಸೃಜನಶೀಲ
ಬರವಣಿಗೆಗಳಲ್ಲಿ ದಾಖಲಾಗಿದೆ. ಲಂಕೇಶ್ ಅವರ ‘ಸಂಕ್ರಾಂತಿ’
(1971), ಎಚ್.ಎಸ್. ಶಿವಪ್ರಕಾಶ್
ಅವರ ‘ಮಹಾಚೈತ್ರ’ (1986), ಗಿರೀಶ್ ಕಾರ್ನಾಡರ
‘ತಲೆದಂಡ’ (1991) ಮತ್ತು ಚಂದ್ರಶೇಖರ ಕಂಬಾರರ
‘ಶಿವರಾತ್ರಿ’ (2011), ಇತ್ತೀಚಿಗೆ ಪ್ರದರ್ಶನ ಕಂಡ ನಟರಾಜ
ಹುಳಿಯಾರ್ ಅವರ ‘ಮುಂದಣ ಕಥನ’ (2017) ಗಳು ಬಸವಯುಗದ
ಕುರಿತ ರಂಗದ ಮೇಲೆ ನಡೆದ ಸೃಜನಶೀಲ ಪ್ರಯೋಗಗಳು. ಅಷ್ಟು ಮಾತ್ರವಲ್ಲದೆ ಸಾಹಿತ್ಯ
ಮತ್ತು ರಂಗಭೂಮಿಯು ತೋರಿದ ಸಾಂಸ್ಕೃತಿಕ ಪ್ರತಿಕ್ರಿಯೆ ಮತ್ತು ಆ ಕಾಲಘಟ್ಟವನ್ನು ವಿಭಿನ್ನ ನೆಲೆಯಲ್ಲಿ
ಚರ್ಚೆಗೆ ತರುವ ಪ್ರಯತ್ನ. ಅದಕ್ಕೂ ಮುನ್ನ ಕಂಪೆನಿ ನಾಟಕಗಳಲ್ಲಿ ಏಣಗಿ ಬಾಳಪ್ಪನವರ
ಮೂಲಕ ‘ಬಸವಣ್ಣ’ನವರು ರಂಗದ ಮೇಲೆ ಕಾಣಿಸಿಕೊಂಡಿದ್ದರು.
ಪ್ರಭುಶಂಕರ ಅವರ ‘ಬೆರಗು’ (1982) ಬಸವಣ್ಣನ ಬದುಕನ್ನು ಮನುಷ್ಯ ನೆಲೆಯಲ್ಲಿ ಹಿಡಿದಿಡುವ ಪ್ರಯತ್ನ. ಅದಕ್ಕೆ ಪ್ರಭುಶಂಕರ ಅವರೇ ಸೂಚಿಸಿದಂತೆ ಖಲೀಲ್ ಗಿಬ್ರಾನ್ ನ ‘Jesus- Son of
Man’ (ಜೀಸಸ್- ಮಾನವ ಪುತ್ರ) ಕೃತಿಯೇ ಪ್ರೇರಣೆ. ಬಸವಣ್ಣನನ್ನೇ ಕಥಾನಾಯಕ ಆಗಿಸಿದ ಕಾದಂಬರಿಗಳ
ಜೊತೆಯಲ್ಲಿ ಬೆಳ್ಳಿತೆರೆಯ ಮೇಲೂ ಎರಡು ಚಿತ್ರಗಳು ತೆರೆಕಂಡವು. ಜಗಜ್ಯೋತಿ
ಬಸವೇಶ್ವರ (1959) ಮತ್ತು ಕ್ರಾಂತಿಯೋಗಿ ಬಸವಣ್ಣ (1983) ಚಿತ್ರಗಳು ಜನಪ್ರಿಯ ನೆಲೆಯಲ್ಲಿ ಬಸವೇಶ್ವರರ ಬದುಕನ್ನು ದಾಖಲಿಸುವ ಪ್ರಯತ್ನಗಳಾಗಿದ್ದವು.
ಕಳೆದ ಎಂಟು
ನೂರೈವತ್ತು ವರ್ಷಗಳ ಅವಧಿಯಲ್ಲಿ ಕನ್ನಡದ ಸಾಂಸ್ಕೃತಿಕ ಲೋಕವು ಬಸವ / ಬಸವಣ್ಣ /ಬಸವರಾಜ /ಬಸವೇಶ್ವರ ರನ್ನು ಹಲವು ನೆಲೆಗಳಲ್ಲಿ ಮುಖಾಮುಖಿಯಾಗುತ್ತ
‘ಬಸವ ಪರಂಪರೆ’ಯನ್ನು ಜೀವಂತವಾಗಿ ಇಟ್ಟಿತ್ತು.
ಹರಿಹರನ ರಗಳೆ, ವಚನಗಳ ಪುನರ್ ದಾಖಲೀಕರಣ, ಶೂನ್ಯ ಸಂಪಾದನೆಗಳು, ಜನಪದ ಬಸವ ಪುರಾಣ, ಮಂಟೆಸ್ವಾಮಿ ಕಾವ್ಯ, ವಚನಗಳ ಸಂಗ್ರಹ-ಸಂಪಾದನೆ, ಕಂಪೆನಿ ನಾಟಕಗಳು, ಸಮಗ್ರ
ವಚನ ಸಂಪುಟ, ವಚನ ವಿಶ್ಲೇಷಣೆ- ಜಿಜ್ಞಾಸೆ,
ಈಗ ನಡೆಯುತ್ತಿರುವ ವೀರಶೈವ-ಲಿಂಗಾಯತ ಚರ್ಚೆ,
ಹೀಗೆ ಬಸವಣ್ಣ ಕನ್ನಡ ಲೋಕವನ್ನ ಆವರಿಸಿಕೊಂಡಿರುವ ರೀತಿ ಬೆರಗು ಮೂಡಿಸುವಂತಹದ್ದು.
ಈ ಹಿನ್ನೆಲೆಯಲ್ಲಿಯೇ ಕೆ.ಎಸ್. ಶ್ರೀಕಂಠನ್ ಅವರ The message of Basava is like a resevior into
which all previous thought flowed, kind like Buddha, simple like Mahaveer,
gentle like Jesus, bold like Mohammad, Basava strikes us almost a wonder of
creation. But what attracts us most to him are those teachings of his which
anticipated the greatest of modern thinkers Marxs and Gandhi ಮಾತುಗಳೂ
ಪ್ರಮುಖ ಎನ್ನಿಸುತ್ತವೆ.
ಶೇಕ್ಸ್
ಪಿಯರ್ ತನ್ನ ‘ಜ್ಯೂಲಿಯಸ್ ಸೀಸರ್’ ನಾಟಕದಲ್ಲಿ ಸೀಜರ್ ನನ್ನು ಕುರಿತು ಮಾರ್ಕ್
ಆಂಟೋನಿ ಹೇಳುವಂತೆ ‘ಮಾನವ ಕುಲವ ಮುನ್ನಡೆಸಿದ ನಾಯಕ’. ಹೌದು ಬಸವ ಕೂಡ ಕೇವಲ ಒಂದು ಪ್ರದೇಶ ಮತ್ತು ಕಾಲಕ್ಕೆ ಸೀಮಿತವಾದವನಲ್ಲ. ನಿಜವಾದ ಅರ್ಥದಲ್ಲಿ ಮಾನವ ಕುಲವನ್ನೇ ಮುನ್ನಡೆಸಿದ ನಾಯಕ. ಅದೇ
ಶೇಕ್ಸ್ ಪಿಯರ್ ಕುರಿತು ಶಾ. ಬಾಲುರಾವ್ ಅವನದೇ ಕೃತಿಯ ಸಾಲನ್ನು ಹೀಗೆ ಉಲ್ಲೇಖಿಸುತ್ತಾರೆ
‘A rarer spirit never did steer humanity- ಅವನಿಗಿಂತಲೂ ವಿರಳವಾದ ಚೈತನ್ಯ
ಮಾನವತೆಯನ್ನು ಮುನ್ನಡೆಸಿದುದಿಲ್ಲ.’ ಎಂಬ ಮಾತುಗಳೂ ಬಸವಣ್ಣನವರಿಗೆ ಅನ್ವಯಿಸುತ್ತವೆ.
ಎಂಟು ನೂರು
ವರ್ಷಗಳ ನಂತರ ಬಸವಣ್ಣ ಮತ್ತು
12ನೇ ಶತಮಾನದ ಚಳವಳಿಗೆ ವಿಶೇಷ ಆದ್ಯತೆ, ಮನ್ನಣೆ ದೊರೆಯಿತು.
ಅದಕ್ಕೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರಣಗಳ ಜೊತೆಯಲ್ಲಿಯೇ ರಾಜಕೀಯ,
ಸಾಮಾಜಿಕ ಕಾರಣಗಳೂ ಇಲ್ಲದಿಲ್ಲ. ಫ.ಗು. ಹಳಕಟ್ಟಿಯವರು ವಚನಗಳ ಮೇಲೆ ಅಭೂತಪೂರ್ವ ಕೆಲಸವು ಹಸ್ತಪ್ರತಿಗಳ
ರೂಪದಲ್ಲಿದ್ದ ವಚನಗಳನ್ನು ಮುದ್ರಿತ ಪುಸ್ತಕ ರೂಪಕ್ಕೆ ತರಲು ಕಾರಣವಾಯಿತು. ಮಠಗಳ ಆವರಣದಲ್ಲಿ ಮತ್ತು ಜನರ ಆಡುಮಾತಿನ ಭಾಗವಾಗಿದ್ದ ವಚನಗಳು ಮುದ್ರಿತ ‘ಪಠ್ಯ’ಗಳಾಗಿ ಸಾಮಾಜಿಕ, ಸಾಂಸ್ಕೃತಿಕ
ಲೋಕ ಪ್ರವೇಶಿಸಿದವು. ವಚನಗಳು ಒಟ್ಟಾರೆ ಕನ್ನಡ ವಾಙ್ಮಯದ ಚಚರ್ಚೆಯನ್ನು
ತನ್ನೆಡೆಗೆ ಸೆಳೆದುಕೊಂಡವು.
ಬೆಳಗಾವಿಯಲ್ಲಿ
ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ
(1924) ಗಾಂಧಿ ಬಸವಣ್ಣನವರ ಸಾಧನೆಯ ಪ್ರಸ್ತಾಪಕ್ಕೆ ಕಾರಣವಾಯಿತು. ಕನ್ನಡ ಮಾತನಾಡುವ ಭಾಷಿಕರೆಲ್ಲ ಒಂದೇ ಆಡಳಿತದ ವ್ಯಾಪ್ತಿಗೆ ಸೇರಿದ ‘ಏಕೀಕರಣ’ದ ನಂತರದ ದಿನಗಳಲ್ಲಿ ಬಸವಣ್ಣನನ್ನು ಕುರಿತ ಚರ್ಚೆಗಳು
ಮುನ್ನೆಲೆಗೆ ಬಂದವು. ಎಂ.ಆರ್. ಶ್ರೀನಿವಾಸಮೂರ್ತಿ ಅವರ ವಚನಧರ್ಮಸಾರ (1956) ವಚನಗಳನ್ನು ಕುರಿತು
ಚರ್ಚಿಸಿದ ಪ್ರಮುಖ ಗ್ರಂಥ. ಅದಕ್ಕಿಂತ ಮುಂಚೆಯೇ ವಚನಗಳ ಮಹತ್ವದ ಕುರಿತ
ಚರ್ಚೆ ನಡೆಯುತ್ತಿರುವ ಹೊತ್ತಿಗೆ 12ನೇ ಶತಮಾನದ ಐತಿಹಾಸಿಕತೆಯ ಕುರಿತ ಸಂಶೋಧನೆ-
ಚರ್ಚೆಗಳೂ ಆರಂಭವಾಗಿದ್ದವು. ಸಂಶೋಧನಾ ಚರ್ಚೆಗಳಲ್ಲಿನ
ಕಿಡಿಯು ಬಿಸಿಯಾಗಿ ಕಾವು ಪಡೆದು ಜೀವಂತವಾಗಿ ಇರುವಂತೆ ಮಾಡಿದ್ದವು.
ಕಲಬುರಗಿಯಲ್ಲಿ
ವಕೀಲರಾಗಿದ್ದ ಸಂಶೋಧಕ ಕಪಟರಾಳ ಕೃಷ್ಣರಾವ್ ಅವರು ತಮ್ಮ ಸಂಶೋಧನಾ ಬರಹಗಳ ಮೂಲಕ ಎತ್ತಿದ ಪ್ರಶ್ನೆಗಳು
ಮತ್ತು ಹುಟ್ಟು ಹಾಕಿದ ಚರ್ಚೆಯು ಹಲವರು ವಿದ್ವಾಂಸರು ಆ ನೆಲೆಯಲ್ಲಿ ತಮ್ಮ ಸಂಶೋಧನೆ ಮುಂದುವರೆಸಲು
ಕಾರಣವಾದವು. ವಚನ
ಹಾಗೂ ಬಸವಣ್ಣನವರನ್ನು ಕುರಿತು ಕಪಟರಾಳ ಕೃಷ್ಣರಾವ್ ಅವರ ಲೇಖನಗಳು ಪ್ರಶ್ನೆಯನ್ನು ಕೇಳುತ್ತಿದ್ದವು.
ಪ್ರಶ್ನೆಗಳೇ ಸಂಶೋಧನೆಗೆ ದಿಕ್ಕುದೆಸೆ ಒದಗಿಸುವಂತಹದ್ದು. ಪ್ರಶ್ನೆಗಳಿಲ್ಲದಿದ್ದರೆ ಉತ್ತರ ಕಂಡುಕೊಳ್ಳುವುದಾದರೂ ಹೇಗೆ? ಸಾಹಿತ್ಯ- ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾದ ‘ಶಿವಾನುಭವ ಮಂಟಪವು ಐತಿಹಾಸಿಕವೇ?’ (ಜಯಂತಿ ಮಾಸಪತ್ರಿಕೆ ಜನವರಿ
1944), ಬಸವೇಶ್ವರನ ವಂಶಕ್ರಮ (ಶರಣಸಾಹಿತ್ಯ ಸಂಪುಟ
10 ಸಂಚಿಕೆ 6-7, ಆಗಸ್ಟ್-ಸೆಪ್ಟೆಂಬರ್
1947), ಬಸವ ಬಿಜ್ಜಳರ ಇತಿಹಾಸದ ಪುನರ್ವಿಮರ್ಶೆ (ಪ್ರಬುದ್ಧ
ಕರ್ನಾಟಕ, ಸಂಪುಟ 29, ಸಂಚಿಕೆ 2), ಬಸವೇಶ್ವರನೂ ಸ್ತ್ರೀ ಸ್ವಾತಂತ್ರ್ಯವೂ (ಶರಣ ಸಾಹಿತ್ಯ ಸಂಪುಟ
2, ಸಂಚಿಕೆ 11 ಫೆಬ್ರುವರಿ 1939), ಬಸವೇಶ್ವರನು ನಾಥ ಸಂಪ್ರದಾಯದ ಅನುಯಾಯಿ (ಪ್ರಬುದ್ಧ ಕರ್ನಾಟಕ,
ಸಂಪುಟ 24, ಸಂಚಿಕೆ 1), ವಾದಭೂಮಿ-
ಶ್ರೀಬಸವೇಶ್ವರರ ಪಂಥ ವಿಚಾರ (ಪ್ರಬುದ್ಧ ಕರ್ನಾಟಕ ಸಂಪುಟ
26. ಸಂಚಿಕೆ 1) ಬರಹಗಳು ನಂತರದ ದಿನಗಳಲ್ಲಿ ಟೀಕೆಗೆ ಗುರಿ
ಪಡಿಸುವುದಕ್ಕೆ ಕಾರಣವಾಗಿದ್ದವು.
ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಳಾಗಿದ್ದ
ಸಂದರ್ಭದಲ್ಲಿ (1967) ಮೈಸೂರು ಸರ್ಕಾರವು ನಡೆಸಿದ ‘ಶ್ರೀ ಬಸವೇಶ್ವರ 8ನೇ ಶತಮಾನೋತ್ಸವ’ವು
ಐತಿಹಾಸಿಕ ಘಟನೆಯಾಯಿತು. ಬಸವಣ್ಣನವರನ್ನು ಜಗತ್ತಿನ ದಾರ್ಶನಿಕರು ಮತ್ತು
ಸಂತರ ಜೊತೆಗಿಟ್ಟು ಅಧ್ಯಯನ ನಡೆಸಿದ ಬರಹಗಳು ಪ್ರಕಟವಾದವು. ಬಸವಣ್ಣ,
ವಚನ, ಚಳವಳಿಗಳ ಐತಿಹಾಸಿಕ ಮಹತ್ವ ದಾಖಲಾಗಿದ್ದರೂ
‘ಇತಿಹಾಸ’ದ ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರೆತಿರಲಿಲ್ಲ.
ಇತಿಹಾಸದ ಪ್ರಶ್ನೆಗಳಿಗೆ ಎದುರಾಗಿ ಉತ್ತರ ಕಂಡುಕೊಳ್ಳುವುದು ಸುಲಭದ ಕೆಲಸವೂ ಆಗಿರಲಿಲ್ಲ.
ಮಹಾಪ್ರಭೆಯ ಬೆಳಕಿನಲ್ಲಿ ಕಗ್ಗತ್ತಲಿನ ಗವಿಯಿಂದ ಹುಡುಕಿ ತಂದ ಸತ್ಯ(?)ದ ಪುಟ್ಟ ಹಣತೆಯ ತೋರುವುದು ಮತ್ತು ಆಡಿದ ಮಾತುಗಳನ್ನು ದಕ್ಕಿಸಿಕೊಳ್ಳುವುದು ಕಷ್ಟದ ಸಂಗತಿಯೇ
ಆಗಿತ್ತು. ಕಷ್ಟ ಎಂದು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ಎದುರಿಗಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೇ ಬೇಕು. ಹಾಗೆಯೇ
ಸಿಕ್ಕ ಉತ್ತರ ಹುಟ್ಟುಹಾಕುವ ಸವಾಲುಗಳ ಎದುರಿಸಲೇ ಬೇಕು. ಹೀಗೆ ಸವಾಲು ಎದುರಿಸಲು
ಸಿದ್ಧರಾದವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತದ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದ
ಮುಖ್ಯಸ್ಥರಾಗಿದ್ದ ಡಾ. ಪಾಂಡುರಂಗ ಭೀಮರಾವ ದೇಸಾಯಿ. ಆಗ ಪಂಜಾಬ ರಾಜ್ಯದ ರಾಜ್ಯಪಾಲರಾಗಿದ್ದ ಡಿ.ಸಿ. ಪಾವಟೆ ಅವರ ಒತ್ತಾಯದ ಮೇರೆಗೆ ನಡೆಸಿದ ಸಂಶೋಧನಾ ಕೃತಿ ‘Basaveshwar and
his Times ಅನ್ನು 1968ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ
‘ಕನ್ನಡ ಸಂಶೋಧನ ಸಂಸ್ಥೆ’ ಪ್ರಕಟಿಸಿತ್ತು. ಬಸವಣ್ಣನವರನ್ನು ಕುರಿತ ಅಪರೂಪದ ಮತ್ತು ಅಪೂರ್ವ ಕೃತಿ. ಅದು ಕೇವಲ
ಪ್ರಕಟವಾದ ಕಾಲದ ಐತಿಹಾಸಿಕ ಕಾರಣಗಳಿಂದಾಗಿ ಪ್ರಮುಖವಾದ ಕೃತಿಯಲ್ಲ. ದೇಸಾಯಿ
ಅವರು ತಮ್ಮ ಸಂಶೋಧನೆಯ ಸಂದರ್ಭದಲ್ಲಿ ಕಂಡುಕೊಂಡ ವಿವರ, ಸತ್ಯವನ್ನು ವಸ್ತುನಿಷ್ಟ
ರೀತಿಯಲ್ಲಿ ದಾಖಲಿಸಿದ ಕಾರಣಕ್ಕಾಗಿ ಮಹತ್ವದ್ದು.
ಬಸವ, ವಚನ, 12ನೇ ಶತಮಾನದ ಕುರಿತು ನೂರಾರು ಗ್ರಂಥಗಳಲ್ಲಿ ಸಾವಿರಾರು ಪುಟಗಳಷ್ಟು ಬರವಣಿಗೆಯಿದೆ.
ಹೀಗೆ ಬಂದ ಬಹುತೇಕ ಗ್ರಂಥಗಳು, ಬರಹಗಳು ಧಾರ್ಮಿಕ ಹಾಗೂ
ಭಾವನಾತ್ಮಕ ಕಾರಣಗಳಿಂದಾಗಿ ರಚಿತವಾದಂತಹವುಗಳು. ಹಾಗೆಯೇ ಭಾಷಿಕ-
ಸಾಹಿತ್ಯಕ ಮಹತ್ವ, ಸಾಮಾಜಿಕ ಚಲನೆಯ ಸ್ವರೂಪ ಹಾಗೂ ತಾತ್ವಿಕ
ಜಿಜ್ಞಾಸೆಗಳನ್ನು ಕುರಿತ ಗ್ರಂಥಗಳೂ ಸಾಕಷ್ಟು ಸಂಖ್ಯೆಯಲ್ಲಿವೆ. ಇತಿಹಾಸದ
ಆಕರಗಳನ್ನು ಮುಂದಿಟ್ಟುಕೊಂಡು ತನ್ನ ಎದುರಿನಲ್ಲಿರುವ ಆಧಾರಗಳನ್ನು ಉಲ್ಲೇಖಿಸಿ, ವಿಶ್ಲೇಷಣೆ ಮಾಡಿ ಸತ್ಯದ ಸಮೀಪ ಸಾಗುವ ಪ್ರಯತ್ನ ಅಪರೂಪ. ಈ ಹಿನ್ನೆಲೆಯಲ್ಲಿ
ಪಿ.ಬಿ. ದೇಸಾಯಿ ಅವರ ಈ ಪುಸ್ತಕ ಇತಿಹಾಸದ ನೆಲೆಯಲ್ಲಿ
ನಿಂತು ನೋಡಿದ ಮಹತ್ವದ ನೋಟ ಒದಗಿಸುವುದಕ್ಕೆ ಕಾರಣವಾಗುತ್ತದೆ.
ಐದು ದಶಕಗಳ
ಹಿಂದೆ ಇಂಗ್ಲಿಷಿನಲ್ಲಿ ಪ್ರಕಟವಾಗಿದ್ದ ಈ ಪುಸ್ತಕವು ಏನೇನೋ ಕಾರಣಗಳಿಂದಾಗಿ ಓದುಗರಿಗೆ ಕನ್ನಡದಲ್ಲಿ
ದೊರೆಯುವುದು ಸಾಧ್ಯವಾಗಿರಲಿಲ್ಲ.
ವಚನಗಳ ಕುರಿತ ಅಧ್ಯಯನದಲ್ಲಿ ತಮ್ಮ ಜೀವಿತವಿಡೀ ದುಡಿದ ಡಾ.ಎಂ.ಎಂ. ಕಲಬುರ್ಗಿ ಅವರ ಒತ್ತಾಸೆಯಿಂದ
ಈ ಗ್ರಂಥವು ಕನ್ನಡಕ್ಕೆ ತರ್ಜುಮೆಯಾಗುವ ಪ್ರಕ್ರಿಯೆ ಆರಂಭವಾಯಿತು. ಹಿಂದೂಸ್ತಾನಿ
ಸಂಗೀತ ಮತ್ತು ಕ್ರೀಡೆಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದ ಪ್ರೊ.
ಸದಾನಂದ ಕನವಳ್ಳಿ ಅವರು ದೇಸಾಯರ ಗ್ರಂಥವನ್ನು ಅನುವಾದಿಸಿದ್ದರು. ಹಸ್ತಪ್ರತಿ ರೂಪದಲ್ಲಿದ್ದ ಅರೆಬರೆಯಾಗಿದ್ದ ಅಪೂರ್ಣ ಅನುವಾದವನ್ನು ಸೊಗಸಾದ ರೀತಿಯಲ್ಲಿ
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಪರಿಷ್ಕರಿಸಿ ನೀಡಿದ್ದಾರೆ.
ಎಡೆಯೂರು- ಡಂಬಳ- ಗದಗ ಜಗದ್ಗುರು
ತೋಂಟದಾರ್ಯ ಸಂಸ್ಥಾನಮಠದ ಡಾ.ಎಂ.ಎಂ.
ಕಲಬುರ್ಗಿ ಅಧ್ಯಯನ ಸಂಸ್ಥೆಯು ಈ ಪುಸ್ತಕವನ್ನು ಪ್ರಕಟಿಸಿದೆ. ಪಿ.ಬಿ. ದೇಸಾಯಿ ಅವರ ಮಕ್ಕಳಾದ ಶ್ರೀನಿವಾಸ,
ಮೋಹನದಾಸ, ಡಾ. ಆನಂದ,
ಡಾ. ವಸಂತ, ಡಾ. ಶ್ರೀವತ್ಸ ಅವರ ಗ್ರಂಥ ದಾಸೋಹ ಮಾಡಿದ್ದಾರೆ.
ವಚನ ಸಾಹಿತ್ಯ, ಪುರಾಣ, ರಗಳೆ, ಸಾಂಸ್ಕೃತಿಕ ಪಠ್ಯಗಳು ರೂಪಿಸಿದ ‘ಬಸವಣ್ಣ’ನ ಸುತ್ತ ಪ್ರಭೆಯ ಬೆಳಕು ಹರಡಿದೆ. ಆದಾಗ್ಯೂ ಇತಿಹಾಸದ ‘ಬಸವೇಶ್ವರ’ರನ್ನು
ದೇಸಾಯರು ಈ ಗ್ರಂಥದಲ್ಲಿ ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅಧ್ಯಯನ ನಡೆಸುತ್ತಿರುವ ವಸ್ತುವಿನ ಜೊತೆಗೆ ಇತಿಹಾಸಕಾರನ ವಸ್ತುನಿಷ್ಟ ಅಂತರವನ್ನು ಇಡೀ
ಕೃತಿಯುದ್ದಕ್ಕೂ ನೋಡಬಹುದು. ಹಾಗಂತ ಈ ಗ್ರಂಥವು ಕೇವಲ ಇತಿಹಾಸದ ಆಕರಗಳನ್ನು
ಮಾತ್ರ ಬಳಸಿ ರಚಿಸಿದ ಕೃತಿಯೇನಲ್ಲ. ಕಾವ್ಯ-ಪುರಾಣಗಳ
ಹೊಳಹುಗಳನ್ನು ಇತಿಹಾಸದ ಸಾಕ್ಷ್ಯಾಧಾರಗಳೊಂದಿಗೆ ಇಟ್ಟುನೋಡುವ ಕ್ರಮ ಇಲ್ಲಿದೆ. ಹಾಗಾಗಿಯೇ ಇಡೀ ಗ್ರಂಥದಲ್ಲಿ ಲೇಖಕರು ಭಾವನಾತ್ಮಕ ಭಾಗಿಯಾಗಿಲ್ಲ. ಬದಲಿಗೆ ಸತ್ಯವನ್ನು ಕುತೂಹಲದಿಂದ ನೋಡುವ, ಹುಡುಕುವ,
ದಾಖಲಿಸುವ ‘ಸಾಕ್ಷಿ’ ಆಗಿದ್ದಾರೆ.
ಆಕರಗಳ ನಿಖರತೆಯನ್ನು ನಿರ್ಧರಿಸುವ ದೇಸಾಯರ ಕೌಶಲ್ಯ ಬೆರಗುಗೊಳಿಸುವಂತಿದೆ.
ಶಾಸನಗಳು, ಸ್ಮಾರಕಗಳು, ಶಿಲ್ಪಗಳು
ಸೇರಿದಂತೆ ಲಭ್ಯವಿರುವ ಮೂಲಗಳನ್ನು ಸಂಶೋಧನೆಗೆ ಪರಿಗಣಿಸಿದ್ದಾರೆ. ಅವರ
ಇಡೀ ಶೋಧವು ಇತಿಹಾಸದ ಮಾನವರೂಪಿ ‘ಬಸವೇಶ್ವರ’ರನ್ನು
ಅಧಿಕೃತವಾಗಿ ದಾಖಲಿಸುತ್ತದೆ. ಅವರ ಪ್ರತಿ ಹೇಳಿಕೆ, ತಳೆವ ನಿಲುವಿಗೆ ಆಕರಗಳ ಆಧಾರದ ನೆರವಿದೆ.
ಮುನ್ನುಡಿಯಲ್ಲಿ
ಡಿ.ಸಿ.
ಪಾವಟೆ ಅವರು ಬಸವಣ್ಣನವರನ್ನು ಕುರಿತು ಜೀವನ ಚರಿತ್ರೆ ಬರೆಯುವವರು ಎದುರಿಸುವ ಸವಾಲನ್ನು
ಹೀಗೆ ದಾಖಲಿಸಿದ್ದಾರೆ. ‘ನೈಜವಾಗಿ, ಬಸವೇಶ್ವರರ
ನಿಜವಾದ ಜೀವನ ಚರಿತ್ರೆಯನ್ನು ಕ್ರೋಡೀಕರಿಸುವದರಲ್ಲಿ ಅಪರಿಮಿತ ಅಡಚಣೆಗಳಿವೆ. ಏಕೆಂದರೆ ಬಸವೇಶ್ವರರು ಸಮಕಾಲೀನ ಶಾಸನಗಳಲ್ಲಿ ಕಂಡು ಬರುವುದಿಲ್ಲ ಮತ್ತು ಸದ್ಯ ಇರುವ ಸಾಹಿತ್ಯಿಕ
ಕೃತಿಗಳು ಅವರನ್ನು ಕುರಿತು ಸಾಕಷ್ಟು ಐತಿಹಾಸಿಕ ಸತ್ಯಗಳನ್ನು ಒದಗಿಸುವುದಿಲ್ಲ. ಹೀಗೆ ಇತಿಹಾಸಕಾರನಿಗೂ ಮತ್ತು ಜೀವನ ಚರಿತ್ರೆ ಬರೆಯುವವನಿಗೂ ಈ ಕೆಲಸ ಗಂಭೀರವಾದ ಸವಾಲನ್ನು
ತಂದುಕೊಡುತ್ತದೆ’.
ಈ ಸವಾಲನ್ನು
ಸಮರ್ಥವಾಗಿ ಎದುರಿಸಿ ನಿಂತ ಕೃತಿ ಪಿ.ಬಿ.ದೇಸಾಯಿ ಅವರ ‘ಬಸವೇಶ್ವರ ಮತ್ತು
ಅವನ ಕಾಲ’. 348 ಪುಟಗಳಷ್ಟು ವ್ಯಾಪಕವಾಗಿರುವ ಈ ಗ್ರಂಥವನ್ನು ದೇಸಾಯರು
ಎರಡು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಒಟ್ಟು 27 ಅಧ್ಯಾಯಗಳಿವೆ. ಒಂದನೇ ಭಾಗವು ಬಿಜ್ಜಲನಿಗೆ ಸಂಬಂಧಿಸಿದ ಇತಿಹಾಸ
ಕುರಿತ ಚರ್ಚೆಯಾದರೆ ಎರಡನೇ ಭಾಗವು ಬಸವೇಶ್ವರರಿಗೆ ಸಂಬಂಧಿಸಿದ್ದು. ಮೊದಲ
9 ಅಧ್ಯಾಯಗಳು ಬಿಜ್ಜಲನನ್ನು ಕುರಿತವುಗಳು. ಕಲ್ಯಾಣಿ ಚಾಲುಕ್ಯರ
ಸಾಮಂತನಾಗಿದ್ದ ಬಿಜ್ಜಲ ನಂತರ ತನ್ನದೇ ಕಲಚುರಿ ಮನೆತನ ಆಡಳಿತ ನಡೆಸಲು ಕಾರಣನಾದವನು. ಬಿಜ್ಜಲನಲ್ಲಿ ಎರಡು ದಶಕಗಳ ಕಾಲ ಕೆಲಸ ಮಾಡಿದ ಬಸವೇಶ್ವರ ಸಾಮಾನ್ಯ ಕರಣಿಕನಾಗಿ ವೃತ್ತಿ
ಆರಂಭಿಸಿ ಭಂಡಾರಿಯ ಉನ್ನತ ಸ್ಥಾನಕ್ಕೆ ಏರಿದ್ದ. ಹೀಗಾಗಿ ಬಿಜ್ಜಲನ ಇತಿಹಾಸದ
ವಿವರಗಳು ಬಸವೇಶ್ವರರ ಅಧ್ಯಯನಕ್ಕೆ ಪೂರಕ. ಕಲ್ಯಾಣಿ ಚಾಲುಕ್ಯರು,
ಕಲಚುರಿ ಮನೆತನದ ವಿವರಗಳು, ಬಿಜ್ಜಲನ ಆರಂಭಿಕ ಜೀವನ,
ರಾಜ್ಯಾಪಹರಣ, ಧಾರ್ಮಿಕ ನಂಬಿಕೆ, ರಾಜಕೀಯ ಕ್ಷೋಭೆ ಬಿಜ್ಜಲನ ಅಂತ್ಯಗಳ ಕುರಿತ ವಿವರಗಳನ್ನು ಲೇಖಕರು ಮೊದಲ ಭಾಗದಲ್ಲಿ ಚರ್ಚಿಸಿದ್ದಾರೆ.
ಬಸವೇಶ್ವರರನ್ನು ಅರಿಯುವುದಕ್ಕೆ ಈ ಭಾಗವು ಚಿಮ್ಮು ಹಲಗೆಯ ರೀತಿಯಲ್ಲಿ ಕೆಲಸ ಮಾಡುತ್ತದೆ.
ಗ್ರಂಥದ
ಜೀವ ಮತ್ತು ಜೀವಾಳ ಆಗಿರುವ ಎರಡನೇ ಭಾಗವು ಧರ್ಮ ಮತ್ತು ಸಮಾಜದ ಕುರಿತ ಚರ್ಚೆಯೊಂದಿಗೆ ಆರಂಭಿಸಿ ಬಸವೇಶ್ವರನ
ಐತಿಹಾಸಿಕತೆ, ಶಾಸನಗಳಲ್ಲಿ, ಸಾಹಿತ್ಯದಲ್ಲಿ ಬಸವೇಶ್ವರ, ಬಾಗೇವಾಡಿ, ಸಂಗಮ, ಆರಂಭಿಕ ಜೀವನ,
ಶಿಕ್ಷಣ, ವ್ಯಕ್ತಿತ್ವ, ಆಂದೋಲನ,
ಬಿಜ್ಜಲನ ಮರಣ, ಪುರಾಣಗಳ ವೃತ್ತಾಂತ, ಚಾರಿತ್ರಿಕ ಎಳೆಗಳು ಅಧ್ಯಾಯದಲ್ಲಿ ಬೆಳೆಯುತ್ತ ಹೋಗುತ್ತದೆ. ಟಿಪ್ಪಣಿಗಳು
ಮತ್ತು ಸ್ಪಷ್ಟೀಕರಣಗಳು, ದಿನಾಂಕಗಳು ಮತ್ತು ಕಾಲಾನುಕ್ರಮಣಿಕೆ,
ಮೂವತ್ತಾರು ವರ್ಷಗಳು, ಪೂರ್ವಗ್ರಹಗಳು ಮತ್ತು ತಪ್ಪುಗ್ರಹಿಕೆಗಳು
ಹಾಗೂ ಕೊಡುಗೆ ಕುರಿತು ದೇಸಾಯಿ ಅವರು ವಿವರವಾಗಿ ಅನುಮಾನಕ್ಕೆ ಎಡೆಯಿಲ್ಲದಂತೆ ಚರ್ಚಿಸಿದ್ದಾರೆ.
ಅನುಬಂಧದಲ್ಲಿ
ನೀಡಿರುವ ಮಂಗಳವೇಢೆ ಮತ್ತು ಕಲ್ಯಾಣದ ಪುರಾತನತೆ,
ಶಾಸನಗಳ ಪಠ್ಯಗಳು, ಟಿಪ್ಪಣಿಗಳು, ಛಾಯಾಚಿತ್ರಗಳು, ನಕ್ಷೆಗಳು ಅಧ್ಯಯನದ ಖಚಿತತೆಗೆ ಸಾಕ್ಷಿಯಾಗಿವೆ
ಮತ್ತು ಪೂರಕ ಮಾಹಿತಿ ಒದಗಿಸುತ್ತವೆ.
ಐತಿಹಾಸಿಕ
ವ್ಯಕ್ತಿಯೊಬ್ಬನ ಕುರಿತು ಇತಿಹಾಸಕಾರನೊಬ್ಬ ಇತಿಹಾಸದ ವಿವರಗಳೊಂದಿಗೆ ನಡೆಸುವ ಸಂಶೋಧನೆಗೆ ಈ ಗ್ರಂಥವು
ಮಾದರಿಯಾಗಿದೆ. ದೇಸಾಯಿ ಅವರು ಬಸವ ಅಥವಾ ಬಸವಣ್ಣ ಎಂಬ ಪದಗಳನ್ನು ಬಳಸದೇ ಇಡೀ ಗ್ರಂಥದುದ್ದಕ್ಕೂ
‘ಬಸವೇಶ್ವರ’ ಎಂಬುದನ್ನೇ ಉಳಿಸಿಕೊಂಡಿದ್ದಾರೆ.
ಅದು ಭಾವನಾತ್ಮಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಸಂಸ್ಕೃತೀಕರಣಗೊಂಡ ಬಸವನ ಬಗ್ಗೆ
ಗೌರವ ಹಾಗೂ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಇರಬಹುದು ಎನ್ನಿಸುತ್ತದೆ.
ಸಾಮಾಜಿಕ
ಚಲನೆಯ ಸ್ವರೂಪದ ಬದಲಾವಣೆಯೊಂದಿಗೆ ಕನ್ನಡದ್ದೇ ನೆಲದ ಸಾಂಸ್ಕೃತಿಕ, ಸಾಹಿತ್ಯಿಕ, ಧಾರ್ಮಿಕ ಚೇತನವನ್ನು ಕುರಿತಾಗಿ ಇಂಗ್ಲಿಷ್ ಭಾಷೆಯಲ್ಲಿ ನಡೆದ
ಅಧ್ಯಯನವು ತಡವಾಗಿಯಾದರೂ ಕನ್ನಡ ಓದುಗರಿಗೆ ಲಭ್ಯವಾಗಿದೆ. ಪುಸ್ತಕವು ತನ್ನ
ಓದುಗನಿಗಾಗಿ ಕಾಯತ್ತಿರುತ್ತದೆ ಎಂಬ ಮಾತಿದೆ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಪರಿಷ್ಕರಣೆಗಾಗಿ ಈ ಪುಸ್ತಕ ಕಾಯುತ್ತಿತ್ತು ಎಂದು ಕಾಣಿಸುತ್ತದೆ.
ಪ್ರತಿ ಪುಟವನ್ನೂ ಓದಿಗೆ ಸಜ್ಜುಗೊಳಿಸಿರುವುದರ ಹಿಂದಿನ ಶ್ರಮ ಎದ್ದುಕಾಣುತ್ತದೆ.
ಹಲವು ಮನಸ್ಸುಗಳು ಪ್ರೀತಿಯಿಂದ ಆಗು ಮಾಡಿದ ಬಸವಣ್ಣನನ್ನು ಕುರಿತ ‘ಇತಿಹಾಸ’ ಇರುವ ಐತಿಹಾಸಿಕ ಗ್ರಂಥವಿದು. ಇದು ನಿನ್ನೆಯ ಪ್ರಶ್ನೆಗಳಿಗೆ ಮಾತ್ರವಲ್ಲದೆ, ಇಂದು ಕೇಳಲಾಗುತ್ತಿರುವ
ಪ್ರಶ್ನೆಗಳಿಗೂ ತನ್ನೊಳಗೆ ಉತ್ತರಗಳನ್ನು ಇಟ್ಟುಕೊಂಡಿದೆ.
-
ದೇವು
ಪತ್ತಾರ
ಕಾಮೆಂಟ್‌ಗಳು